ಹಿಂದು ಮಹಾಸಭಾ ಗಣಪತಿ ವಿಸರ್ಜನೆ

26 TKE 1
ತರೀಕೆರೆಯಲ್ಲಿ ಆಯೋಜಿಸಿದ್ದ ಹಿಂದು ಮಹಾಸಭಾ ಗಣಪತಿಯ ಶೋಭಾಯಾತ್ರೆ.
Published on

ತರೀಕೆರೆ: ಪಟ್ಟಣದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್‌ನಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣಪತಿಯನ್ನು ಸೋಮವಾರ ಐತಿಹಾಸಿಕ ಚಿಕ್ಕೆರೆಯಲ್ಲಿ ವಿಸರ್ಜಿಸಲಾಯಿತು.

ಪಟ್ಟಣದ ಎಂಜಿ, ಬಿಎಚ್, ಲಿಂಗದಹಳ್ಳಿ ರಸ್ತೆ ಸೇರಿ ಪ್ರಮುಖ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಪೊಲೀಸರ ಬೆಂಗಾವಲಿನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ಕೇಸರಿ ಧ್ವಜ ಹಾರಿಸಿ ವಿವಿಧ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಶೋಭಾಯಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆಯಕಟ್ಟಿನ ಜಾಗದಲ್ಲಿ, ವಿವಿಧ ಮಸೀದಿಗಳಿಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಪಟ್ಟಣದ 10ಕ್ಕೂ ಅಧಿಕ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಒಂದು ಡ್ರೋನ್ ಕ್ಯಾಮರಾ ಮೂಲಕ ಶೋಭಾಯಾತ್ರೆಯ ದೃಶ್ಯ ಸೆರೆಹಿಡಿಯಲಾಯಿತು.
ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತಿತರ ಪೊಲೀಸ್ ಅಧಿಕಾರಿಗಳು ಸೇರಿ 400 ಮಂದಿ ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣೆ ಪಡೆ, ಜಿಲ್ಲಾ ಸಶಸ ಪಡೆ, ಕೆಎಸ್‌ಆರ್‌ಪಿ ಒಂದು ಹಾಗೂ ಡಿಎಆರ್ 2 ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಗಣೇಶ ಮೂರ್ತಿ ಜಲಸ್ತಂಭನ ಆಗುವವರೆಗೂ ಎಸ್ಪಿ ಡಾ. ವಿಕ್ರಮ ಅಮಟೆ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದರು.
ಹಿಂದು ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷ ಡಿ.ಎನ್.ಶಿವರಾಜ್‌ಕುಮಾರ್, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಚ್.ಮಹೇಂದ್ರ, ಬಜರಂಗದಳ ತಾಲೂಕು ಸಂಚಾಲಕ ವಿ.ಆರ್.ಜಗದೀಶ್, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶಾಮ್‌ಪ್ರಸಾದ್, ನಗರ ಸಂಚಾಲಕ ಶಶಿ, ಪ್ರಮುಖರಾದ ಅನೀಲ್, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net