ಸಂಸತ್​ನಲ್ಲಿ ಜೋರಾದ ಡ್ರಗ್ಸ್ ವಾಕ್ಸಮರ

Parliment 15
Published on

ನವದೆಹಲಿ: ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಮಾಫಿಯಾ ಕುರಿತು ಸಂಸತ್​ನ ಉಭಯ ಸದನದಲ್ಲೂ ಮಂಗಳವಾರ ಬಿರುಸಿನ ಚರ್ಚೆ ನಡೆಯಿತು. ಸಿನಿಮಾರಂಗದಲ್ಲಿ ಡ್ರಗ್ ಬೇರೂರಿದೆ ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪಿಸಿದರು. ಇದಕ್ಕೆ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ತಿರುಗೇಟು ನೀಡಿದರು. ಸಂಸತ್​ನ ಹೊರಗೆ ಸಿನಿಮಾ ನಟ-ನಟಿಯರ ಪರ ಮತ್ತು ವಿರುದ್ಧವಾಗಿ ಟೀಕಿಸಿದ್ದಾರೆ. ನಟಿಯರಾದ ತಾಪ್ಸಿ ಪನ್ನು, ಸೋನಮ್ ಕಪೂರ್ ಸೇರಿದಂತೆ ಕೆಲವರು ಜಯಾ ಬಚ್ಚನ್ ಬೆಂಬಲಕ್ಕೆ ನಿಂತಿದ್ದರೆ ಮತ್ತೆ ಕೆಲವರು ಕಂಗನಾ, ರವಿ ಕಿಶನ್ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ರವಿ ಕಿಶನ್ ಹೆಸರು ಹೇಳದೆಯೇ ಅಸಮಾಧಾನ ಹೊರಹಾಕಿದ ಜಯಾ, ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಬಾಲಿವುಡ್​ಗೆ ಕಳಂಕ ತರುವ ರೀತಿಯಲ್ಲಿ ಮಾತನಾಡುವುದು ಬೇಡ. ಬಾಲಿವುಡ್​ನ್ನು ಕೇಂದ್ರ ಸರ್ಕಾರ ರಕ್ಷಿಸಬೇಕು. ಬದಲಿಗೆ, ಇಂಥ ಹೇಳಿಕೆಗಳನ್ನು ಉತ್ತೇಜಿಸುವುದಲ್ಲ ಸರಿಯಲ್ಲ ಎಂದರು.

ಇದಕ್ಕೆ ನಂತರದಲ್ಲಿ ಪ್ರತಿಕ್ರಿಯಿಸಿದ ರವಿ ಕಿಶನ್, ಜಯಾ ನನಗಿಂತ ಹಿರಿಯರು. ಆದರೆ ಯಾಕಾಗಿ ನನ್ನ ವಿರುದ್ಧ ಮಾತನಾಡಿದರೋ ಅರ್ಥವಾಗಿಲ್ಲ. ಡ್ರಗ್ಸ್ ಹಾವಳಿಯಿಂದ ಸಿನಿಮಾ ಕ್ಷೇತ್ರ ರಕ್ಷಿಸಬೇಕಿದೆ ಎಂದು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಜಯಾ ಬಚ್ಚನ್ ವಿರುದ್ಧ ಟ್ವಿಟ್ಟರ್​ನಲ್ಲಿ ಕೆಂಡ ಕಾರಿದ ಕಂಗನಾ ರಾಣಾವತ್, ಅವರ ಮಗಳು ಶ್ವೇತಾಳನ್ನು, ಡ್ರಗ್ಸ್ ಸೇವಿಸುವಂತೆ ಮಾಡಿ ದೌರ್ಜನ್ಯಕ್ಕೀಡುಮಾಡುತ್ತಿದ್ದರೆ ಅಥವಾ ಅಭಿಷೇಕ್ ಬಚ್ಚನ್ ದೌರ್ಜನ್ಯ, ಹಿಂಸೆಗಳಿಂದ ಮಾನಸಿಕ ತೊಳಲಾಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಹೀಗೆ ಮಾತನಾಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಹರಿಪ್ರಸಾದಗಿಲ್ಲ – ಬಿ.ಸಿ. ಪಾಟೀಲ

ಆನ್​ಲೈನ್ ರಮ್ಮಿ ಗೇಮ್ ನಿಷೇಧಿಸಿ

ಯುವಕರ ಭವಿಷ್ಯವನ್ನೇ ಹಾಳು ಮಾಡುತ್ತಿರುವ ಆನ್​ಲೈನ್ ರಮ್ಮಿ ಗೇಮ್ಸ್​ಗಳಿಗೆ ನಿಷೇಧ ಹೇರಬೇಕು ಎಂದು ಬಿಜೆಪಿ ರಾಜ್ಯಸಭೆಯ ಸದಸ್ಯ ಕೆ.ಸಿ.ರಾಮಮೂರ್ತಿ ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಮ್ಮಿ ಆಟವಾಡಿ ಹಣ ಕಳೆದುಕೊಂಡ ಯುವಕರು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಹಣ ಗಳಿಸಬೇಕೆಂಬ ಚಟಕ್ಕೆ ಬೀಳುವ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್​ನಂತಹ ಅಪಾಯಕಾರಿ ಜೂಜಾಟ. ಇದರಿಂದ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವರದಿಯೊಂದರ ಪ್ರಕಾರ, ಆನ್​ಲೈನ್ ಗೇಮಿಂಗ್ ಕ್ಷೇತ್ರ ರೂ. 2,200 ಕೋಟಿ ವಹಿವಾಟು ನಡೆಸುತ್ತಿದ್ದು, ವಾರ್ಷಿಕವಾಗಿ ಶೇ.30ರಷ್ಟು ಏರಿಕೆ ಕಾಣುತ್ತಿದೆ. 2023ರ ವೇಳೆಗೆ ವಹಿವಾಟು ರೂ. 12,000 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಬೇರ್ಯಾವ ಕ್ಷೇತ್ರದ ಆರ್ಥಿಕ ವಹಿವಾಟು ಈ ಪರಿಯಲ್ಲಿ ಏರಿಕೆಯಾಗುವುದನ್ನು ನಾನು ನೋಡಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

ವಿಮಾನಯಾನ ತಿದ್ದುಪಡಿ ಮಸೂದೆ ಅಂಗೀಕಾರ

ಕಳೆದ ಮಾರ್ಚ್​ನಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದ ವಿಮಾನಯಾನ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಒಪ್ಪಿಗೆ ಸೂಚಿಸಿದೆ. ಈ ವಿಧೇಯಕವನ್ನು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಸೂರಿ ರಾಜ್ಯಸಭೆಯಲ್ಲಿ ಮಂಡಿಸಿದರು.

ವಾಯುಯಾನ ಏಜೆನ್ಸಿಗಳಾದ ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ), ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ)ಗಳು ಶಾಸನಬದ್ಧ ಸಂಸ್ಥೆಗಳನ್ನಾಗಿ ಪರಿವರ್ತನೆಯಾಗಲಿವೆ. ಕಾಯ್ದೆ ಉಲ್ಲಂಘಿಸಿದಲ್ಲಿ, ಎರಡು ವರ್ಷ ಜೈಲು ಶಿಕ್ಷೆ ಅಥವಾ 10 ಲಕ್ಷ ರೂ.ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದು. ಶಸ್ತ್ರಾಸ್ತ್ರಗಳು, ಮದ್ದುಗುಂಡು, ಸ್ಪೋಟಕ ಹಾಗೂ ಇತರೆ ನಿಷೇಧಿತ ವಸ್ತುಗಳನ್ನು ಸಾಗಿಸುವುದು, ವಿಮಾನ ನಿಲ್ದಾಣ ಸುತ್ತಮುತ್ತ ಅಕ್ರಮ ಕಾಮಗಾರಿ ನಡೆಸಿದಲ್ಲಿ 1 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಇದೆ.

ಖಾಸಗಿ ಬ್ಯಾಂಕ್​ಗಳ ಬಿಗಿ ಹಿಡಿತಕ್ಕೆ ಮಸೂದೆ ಮಂಡನೆ

ಖಾಸಗಿ ಬ್ಯಾಂಕ್​ಗಳಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶದ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು. ಕಳೆದ ಜೂನ್​ನಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸಲು ಈ ಮಸೂದೆ ಮಂಡನೆಯಾಗಿದೆ. ನಷ್ಟ ಅನುಭವಿಸಿದ ಬ್ಯಾಂಕ್​ಗಳ ಪುನರ್​ರಚನೆಗಾಗಿ ಯೋಜನೆ ರೂಪಿಸಲು ಈ ವಿಧೇಯಕ ಆರ್​ಬಿಐಗೆ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕರ ವಿಶ್ವಾಸ ಕುಂದದಂತೆ ಖಾಸಗಿ ಬ್ಯಾಂಕ್​ಗಳ ಮೇಲೆ ಆರ್​ಬಿಐ ಪರಿಣಾಮಕಾರಿ ಹಿಡಿತ ಸಾಧಿಸಲು ಅದು ನೆರವಾಗಲಿದೆ. ಕೆಲವು ನಗರ ಸಹಕಾರಿ ಬ್ಯಾಂಕ್​ಗಳು ಮತ್ತು ಬಹು-ರಾಜ್ಯ ಸಹಕಾರಿ ಬ್ಯಾಂಕ್​ಗಳ ಮೇಲೆಯೂ ಆರ್​ಬಿಐಗೆ ಮೇಲುಸ್ತುವಾರಿ ಅಧಿಕಾರ ನೀಡುವುದು ಕೂಡ ಇದರ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net