ರೇಣುಕಸ್ವಾಮಿ ಹತ್ಯೆ ಕೇಸ್​; ಇದು ಆಗಬಾರದಾಗಿತ್ತು, ಅವರು ನಿರಪರಾಧಿ ಎಂದು ದರ್ಶನ್ ನೆನೆದು ಕಣ್ಣೀರಿಟ್ಟ ತರುಣ್​ ಸುಧೀರ್

Darshan Sudhir
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್​ ಹಾಗೂ ಸಹಚರರಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಸ್ತರಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಈ ಬಗ್ಗೆ ನಿರ್ದೇಶಕ ತರುಣ್​ ಸುಧೀರ್​ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ನಟ ದರ್ಶನ್​ ಜೊತೆ ಚೌಕ (ಅತಿಥಿ ಪಾತ್ರ), ರಾಬರ್ಟ್​, ಕಾಟೇರ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿರುವ ನಿರ್ದೇಶಕ ತರುಣ್​ ಸುಧೀರ್​ ದಾಸನ ಜೊತೆ ಆಪ್ತ ಒಡನಾಟ ಹೊಂದಿದ್ದಾರೆ. ರೇಣುಕಸ್ವಾಮಿ ಹತ್ಯೆ ವಿಚಾರವಾಗಿ ಇದೇ ಮೊದಲ ಬಾರಿಗೆ ಮಾತನಾಡಿರುವ ತರುಣ್​ ನಟ ದರ್ಶನ್​ ಜೈಲು ಸೇರಿರುವುದನ್ನು ನೆನೆದು ಭಾವುಕರಾಗಿದ್ದಾರೆ.

ಈ ಘಟನೆಯಿಂದ ನನಗೆ ತುಂಬ ನೋವಾಗಿದೆ. ನನಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಮನಸ್ಸಿಗಂತೂ ನೋವಾಗಿದೆ. ಆ ಕಡೆ ರೇಣುಕಾ ಸ್ವಾಮಿ ಕುಟುಂಬದಲ್ಲಾದ ದುರಂತದ ಬಗ್ಗೆಯೂ ನನಗೆ ಅಪಾರವಾದ ನೋವಿದೆ. ಈ ಥರದ್ದೊಂದು ಘಟನೆ ಆಗಬಾರದಿತ್ತು. ಆದರೆ ಇಲ್ಲೂ ನನ್ನ ಕುಟುಂಬದಲ್ಲೂ ನೋವಿದೆ. ನನ್ನ ಅಣ್ಣನೇ ಇದನ್ನು ಮಾಡಿದ್ದಾನೆ ಎಂದಾಗ ಎಷ್ಟು ನೋವಾಗುತ್ತದೋ, ಅಷ್ಟೇ ನೋವು ನನಗೂ ಇದೆ.

Darshan Sudhir

ದರ್ಶನ್ ಅವರದ್ದು ತಪ್ಪಲ್ಲ ಅಂತ ಆಗಿ, ಅವರು ಆಚೆ ಬರಬಹುದೇನೋ ಎಂಬ ನಂಬಿಕೆಯಲ್ಲೇ ನಾನು ಇದ್ದೇನೆ. ನಮಗೆ ನಮ್ಮದೇ ಆದಂತಹ ಎಮೋಷನ್ಸ್ ಇರುತ್ತದೆ. ನಾವು ಒಂದೊಂದು ಕಡೆ ವಾಲುತ್ತೇವೆ. ನಾನು ಯಾರ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತೇನೋ, ನನ್ನ ಅಭಿಪ್ರಾಯಗಳು ಅವರ ಕಡೆಗೆ ವಾಲುತ್ತವೆ. ಆದರೆ ಅದನ್ನ ಮೀರಿ ಕಾನೂನು ಇದೆ. ಅದು ಎಲ್ಲವನ್ನೂ ಸರಿಯಾಗಿ ನೋಡುತ್ತದೆ. ಒಂದು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು, ಸತ್ಯಾಂಶಗಳು ಆಚೆ ಬರುತ್ತವೆ. ಇಡೀ ಘಟನೆಯಿಂದ ನನಗೆ ವೈಯಕ್ತಿಕವಾಗಿ, ವೃತ್ತಿಪರವಾಗಿ, ಒಬ್ಬ ಕಾಮನ್ ಮ್ಯಾನ್ ಆಗಿಯೂ ತುಂಬ ನೋವಾಗಿದೆ. ಇದರಲ್ಲಿ ಸರಿ-ತಪ್ಪು ಯಾರದ್ದು ಅಂತ ಯೋಚನೆ ಮಾಡುವುದಕ್ಕೂ ಆಗುತ್ತಿಲ್ಲ. ಆದರೆ ಇದು ಆಗಬಾರದಾಗಿತ್ತು ಎಂದು ಮಾತನಾಡುವ ವೇಳೆ ಭಾವುಕರಾಗಿದ್ದಾರೆ.

ದರ್ಶನ್​ ಅವರ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಕೇಳಿದಾಗ ಡೆವಿಲ್​ ಆದ ಮೇಲೆ ಇನ್ನೊಂದು ಸಿನಿಮಾವನ್ನು ಒಪ್ಪಿಕೊಂಡಿದ್ರು. ಆದಾದ ಮೇಲೆ ನಮ್ಮ ಸಿನಿಮಾ ಇತ್ತು. ಆ ಸಿನಿಮಾದ ಕೆಲಸಗಳೆಲ್ಲಾ ರೆಡಿಯಾಗಿವೆ. ಅವರು ಯಾವಾಗ ಬಂದರೂ, ಅದೇನೇ ಪರಿಸ್ಥಿತಿ ಇದ್ದರೂ, ನಾನಂತೂ ಸಿನಿಮಾ ಮಾಡುತ್ತೇನೆ. ಅವರು ನಿರಪರಾಧಿ ಎಂದೇ ನಾನು ನಂಬಿದ್ದೇನೆ, ಅದೇ ರೀತಿ ಆಗಲಿ ಅಂತ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡುತ್ತೇನೆ ಎಂದು ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net