

ಬೆಂಗಳೂರು: ಸದಾ ಹೊಡೆದಾಟ, ರೀಲ್ಸ್, ಪ್ರಯಾಣಿಕರ ಅಸಭ್ಯ ವರ್ತನೆ ಸೇರಿದಂತೆ ಅನೇಕ ವಿಚಾರಗಳಿಗೆ ರಾಷ್ಟ್ರದ ಗಮನ ಸೆಳೆಯುತ್ತಿದ್ದ ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಸೌಂಡ್ ಮಾಡುತ್ತಿಲ್ಲ. ಆದರೆ, ದೆಹಲಿ ಮೆಟ್ರೋಗೆ ಕಾಂಪಿಟೇಷನ್ ಕೊಡುವಂತಹ ಘಟನೆ ಬೆಂಗಳೂರಿನ ಜೀವನಾಡಿ ಎಂದೇ ಹೆಸರುವಾಸಿಯಾಗಿರುವ ನಮ್ಮ ಮೆಟ್ರೋದಲ್ಲಿ ನಡೆದಿದ್ದು, ಇದು ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಜನನಿಬಿಡ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಬ್ಬರು ಕಿತ್ತಾಡುತ್ತಿರುವುದನ್ನು ನೋಡಬಹುದಾಗಿದೆ. ಇಬ್ಬರು ಅವಾಚ್ಯ ಶಬ್ದಗಳಿಂದ ಒಬ್ಬರನ್ನೊಬ್ಬರು ನಿಂದಿಸುತ್ತಿದ್ದು, ಸಹ ಪ್ರಯಾಣಿಕರು ಜಗಳವನ್ನು ಬಿಡಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೂ 5.5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಇತ್ತ ವಿಡಿಯೋ ನೋಡಿದ ಜನರು ದೆಹಲಿ ಮೆಟ್ರೋದ ಗಾಳಿ ಏನಾದರೂ ಬೆಂಗಳೂರಿಗೆ ಜೋರಾಗಿ ಬೀಸಿತ್ತಾ ಎಂದು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯವಾಗಿದ್ದು, ಬೆಂಗಳೂರು ಮೆಟ್ರೋದಲ್ಲಿ ನಡೆದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರಿಬ್ಬರ ಹೊಡೆದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ BMRCL ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಯಾವ ಕಾರಣಕ್ಕಾಗಿ ಪ್ರಯಾಣಿಕರ ನಡುವೆ ಗಲಾಟೆಯಾಯಿತು ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.