ಸಿಂಪಲ್ ಸುನಿಯ ವಿಭಿನ್ನ ಸ್ಟೋರಿ : ‘ಮೋಡ ಕವಿದ ವಾತಾವರಣ’ ಇಂದು ರಾಜ್ಯಾದ್ಯಂತ ತೆರೆಗೆ

ಸಿಂಪಲ್ ಸುನಿ
ಸಿಂಪಲ್ ಸುನಿ
Published on

ಪ್ರಮುಖ ಮುಖ್ಯಾಂಶಗಳು

  • ಸಿಂಪಲ್​ ಸುನಿ ನಿರ್ದೇಶನದ ಸಿನಿಮಾ ಇಂದು ರಿಲೀಸ್
  • ತ್ರಿಕೋನ ಪ್ರೇಮಕಥೆಯಲ್ಲಿ ಸುನಿ ಹೊಸ ಕರಾಮತ್ತು
  • ಮೂರು ಪಾತ್ರಗಳ ಭಾವ ವಿಭಿನ್ನ
ಬೆಂಗಳೂರು : ಆಕರ್ಷಕ, ಕಾವ್ಯಾತ್ಮಕ ಅನಿಸುವ ಟೈಟಲ್‌ವುಳ್ಳ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯರಾದ ನಿರ್ದೇಶಕ ಸಿಂಪಲ್ ಸುನಿ. ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’, ‘ಆಪರೇಷನ್ ಅಲಮೇಲಮ್ಮ’,‘ಅವತಾರ ಪುರುಷ’, ‘ಒಂದು ಸರಳ ಪ್ರೇಮಕಥೆ’, ‘ಗತವೈಭವ’... ಹೀಗೆ ಅವರ ಸಿನಿಮಾಗಳು ಕಥೆ ಮತ್ತು ಟೈಟಲ್ ಮೂಲಕವೇ ಸದ್ದು ಮಾಡಿದ್ದವು. ಇದೀಗ ಸುನಿ ಮತ್ತೊಮ್ಮೆ ಅದೇ ಹಾದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಕೂಡ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿದೆ. ಟ್ರೇಲರ್, ಹಾಡುಗಳಿಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಇಂದು (ಜೂ. 26) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಹೊಸ ಪ್ರತಿಭೆ ಶೀಲಂ ಜತೆಗೆ ಮೋಕ್ಷಾ ಕುಶಾಲ್, ಸಾತ್ವಿಕಾ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯ ಖುಷಿಯಲ್ಲಿ ಸಿಂಪಲ್ ಸುನಿ, ‘ಶೇ.50ರಷ್ಟು ಲವ್ ಸ್ಟೋರಿ. ಉಳಿದದ್ದು ಇಂದಿನ ಜನರೇಷನ್‌ಗೆ ಆಪ್ತವಾಗುವ ಕಥೆ. ಪ್ರಸ್ತುತ ಸಿನಿಮಾಗಳಿಗೆ ಹೋಲಿಸಿದರೆ ಇದು ವಿಭಿನ್ನ. ಈವರೆಗೆ ನಾನು ಮುಟ್ಟದ ವಿಷಯವನ್ನು ಇಲ್ಲಿ ಹೇಳಿದ್ದೇನೆ. ದ್ವಿತೀಯಾರ್ಧದಲ್ಲಿ ಸೀಟ್-ಎಡ್ಜ್‌ನಲ್ಲಿ ಕೂರಿಸುವಷ್ಟು ಕುತೂಹಲವಿದೆ. ಈ ರೀತಿಯ ಕಥೆಗಳು ಕನ್ನಡಕ್ಕೆ ಅಪರೂಪ. ‘ಮುಂಗಾರು ಮಳೆ’ ತೆರೆಕಂಡ ಬಳಿಕ ಇಂತಹ ಕಥೆಗಳು ಕನ್ನಡದಲ್ಲಿ ವಿರಳವಾಗಿವೆ. ಹಾಗಾಗಿ, ಈ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಸಂಪೂರ್ಣವಾಗಿ ರೆಸಾರ್ಟ್‌ನಲ್ಲಿ ನಡೆಯುವ ಕಥೆ. ್ಲ್ಯಾಷ್‌ಬ್ಯಾಕ್‌ನಲ್ಲಿ ಸ್ಕೂಲ್, ಕಾಲೇಜು ದಿನಗಳು ಬರುತ್ತವೆ. ಹಾಗಂತ ಇಡೀ ಕಥೆ ಅದರ ಬಗ್ಗೆ ಇರಲ್ಲ. ಇಬ್ಬರು ಅಪರಿಚಿತರು ರೆಸಾರ್ಟ್‌ಗೆ ತೆರಳಿದಾಗ ತಮ್ಮ ಬಗ್ಗೆ ಹೇಳಿಕೊಳ್ಳಲು ಪ್ರಾರಂಭಿಸುತ್ತಾರೆ. ಪ್ರೇಕ್ಷಕರಿಗೂ ರೆಸಾರ್ಟ್‌ನಲ್ಲಿ ಕುಳಿತು ಈ ಸಿನಿಮಾ ನೋಡುತ್ತಿದ್ದೇವೆನೋ ಅನಿಸುತ್ತದೆ. 2015ರಿಂದ ಶೀಲಂ ನನ್ನೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ಬೇರೆಯವರಿಗೆ ಡೈಲಾಗ್ ರೀಡಿಂಗ್ ಕೊಡಬೇಕಾದ್ರೆ ಆತನ ಪ್ರತಿಭೆ ನೋಡಿದ್ದೇನೆ. ಜತೆಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾನೆ. ಮೋಕ್ಷಾ ಕುಶಾಲ್ ಸೆಟ್‌ಗೆ ಸಿದ್ಧರಾಗಿಯೇ ಬರುವಂತಹ ನಟಿ. ಅವರು ಪಾತ್ರಗಳಲ್ಲಿ ಜೀವಿಸುತ್ತಾರೆ. ಸಾತ್ವಿಕಾ ರಾವ್ ಚುರುಕು ಬುದ್ಧಿಯ ಕಲಾವಿದೆ. ಏನೇ ಬದಲಾವಣೆ ಮಾಡಿದರೂ, ಥಟ್ ಅಂತಾ ಅದಕ್ಕೆ ಒಗ್ಗಿಕೊಳ್ಳುತ್ತಾರೆ. ಈ ಸಿನಿಮಾದ ಬಳಿಕ ಈ ಮೂವರು ಕನ್ನಡ ಚಿತ್ರರಂಗಕ್ಕೆ ಭರವಸೆಯಾಗುತ್ತಾರೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
"

‘ಮೋಡ ಕವಿದ ವಾತಾವರಣ’ ಎಂದರೆ ಅದು ನಮ್ಮ ಮೂಡ್. ಕೆಲವರು ಆ ಸಮಯದಲ್ಲಿ ಒಂದು ಸಣ್ಣ ವಾಕ್ ಹೋಗೋಣ ಎನ್ನುತ್ತಾರೆ. ಕೆಲವರು ಹಾಡು ಹಚ್ಚಿಕೊಂಡು ಮೋಡ ನೋಡುತ್ತಾ ಕೂರುತ್ತಾರೆ. ಇದು ಅವರವರ ಭಾವ ಅಷ್ಟೇ. ಆ ವಾತಾವರಣವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯ. ಈ ಚಿತ್ರದಲ್ಲೂ ಮೂರು ಪಾತ್ರಗಳ ಭಾವ ವಿಭಿನ್ನ. ಹೀಗಾಗಿಯೇ ಪ್ರತಿಯೊಬ್ಬ ಪ್ರೇಕ್ಷಕರಿಗೂ ಒಂದೊಂದು ರೀತಿಯಲ್ಲಿ ಕನೆಕ್ಟ್ ಆಗುತ್ತವೆ.

— ಸಿಂಪಲ್ ಸುನಿ, ನಿರ್ದೇಶಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net