

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಸಾಕಷ್ಟು ಹೋರಾಟ ನಡೆಸುತ್ತಿದ್ದರೂ ಯಾವೊಬ್ಬ ನಟರು ಕೂಡ ಧ್ವನಿಯೆತ್ತದೆ ಇದ್ದಿದ್ದಕ್ಕೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಯಿತು. ಇದರ ಬೆನ್ನಲ್ಲೇ ದರ್ಶನ್, ಸುದೀಪ್ ಹಾಗೂ ಶಿವರಾಜ್ಕುಮಾರ್ರಂತಹ ನಟರು ಪ್ರತಿಕ್ರಿಯೆ ನೀಡಿದರು.
ಇದರ ನಡುವೆ ನಟ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಅವರು ಕಾವೇರಿ ಹೋರಾಟದ ಬಗ್ಗೆ ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಅನೇಕ ವರ್ಷಗಳಿಂದ ಸಾಕಷ್ಟು ಬದಲಾವಣೆಯಾದರೂ ಕಾವೇರಿ ಹೋರಾಟದಲ್ಲಿ ಮಾತ್ರ ಏನು ಬದಲಾಗಿಲ್ಲ ಎಂಬರ್ಥದಲ್ಲಿ ಮಂಜು ಮಾಂಡವ್ಯ ಪೋಸ್ಟ್ ಮಾಡಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
ಸಂಡೆ ಮಂಡೆ ಜಯಲಲಿತ ಮು*ಡೆ ಅಂತ ಗೆಳೆಯನೊಬ್ಬ ಪ್ರಾಸಬದ್ದವಾಗಿ ಘೋಷಣೆ ಕೂಗಿದಾಗ ಬೀಸಿ ಬಂದ ಪೊಲೀಸ್ ಲಾಠಿ ಗೆಳೆಯನ ಮೇಲೆ ಬಾಸುಂಡೆ ಮೂಡಿಸಿತ್ತು. ಅದು ಮಂಡ್ಯದಲ್ಲಿ ನಮನ್ನೆಲ್ಲ ಸ್ಕೂಲ್ ಇಂದ ಕಾವೇರಿ ಹೋರಾಟಕ್ಕೆ ಕರೆದುಕೊಂಡು ಹೋದಾಗ ನಡೆದ ಘಟನೆ. ತಜ್ಞರು ಆಗಿನಿಂದಲೂ ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಈಗ AI world, ಹುಡುಗಿಯರ ಬಾಯ್ ಫ್ರೆಂಡ್ಗಳು watsapp status ಗಿಂತ ವೇಗವಾಗಿ ಬದಲಾಗುತ್ತಿದ್ದಾರೆ. ಆದರೆ ಕಾವೇರಿ ಮಾತ್ರ ಅದೇ ನಿಷ್ಠೆಯಿಂದ ತಮಿಳುನಾಡಿಗೆ ಹರಿಯುತ್ತಲೇ ಇದ್ದಾಳೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ.
ರಾಜಕೀಯ ಪಕ್ಷಗಳು ಬದಲಾಗಿದೆ. ರಾಜಕಾರಣಿಗಳು ಪಕ್ಷ ಬದಲಾಯಿಸಿದ್ದಾರೆ. ಕಾವೇರಿ ಹೋರಾಟಗಾರರು ಬದಲಾಗಿದ್ದಾರೆ. ಸ್ಟಾರ್ ನಟರ stardom ಬದಲಾಗಿದೆ. ಆದರೆ, ಕಾವೇರಿ ಬದಲಾಗಿಲ್ಲ. ಅದೇ ನಿಷ್ಠೆಯಿಂದ ಹರಿಯುತ್ತಿದ್ದಾರೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಕರೊನಾ ಬಂದಮೇಲೆ ಕನ್ನಡಕ್ಕೆ ಡಬ್ಬಿಂಗ್ ಬೇಡ ಎಂದು ಡಬ್ಬಿಂಗ್ ವಿರೋಧವಾಗಿ ನಿಂತವರ(ನನ್ನನ್ನು ಸೇರಿಸಿ) ಮನಸ್ಥಿತಿಗಳು ಬದಲಾಗಿ ಬದಲಾವಣೆಯನ್ನು ಒಪ್ಪಿಕೊಂಡಿವೆ. ಅಪ್ಪಿಕೊಂಡಿವೆ. ಡಬ್ಬಿಂಗ್ ವಿರೋಧವಾಗಿ ಬರೆದ ನನ್ನ ಲೇಖನವನ್ನು ನಾನು ಕೂಡ ಸೈಲೆಂಟ್ ಆಗಿ ಡಿಲೀಟ್ ಮಾಡಿ ಆಗಿದೆ. ಆದರೆ ಕರೊನಾ ಬಂದ ಮೇಲೂ ಕಾವೇರಿದು ಅದೇ ನಿಷ್ಠೆ, ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ.
ನನ್ನದು ಒಂದೇ ಕೋರಿಕೆ ಸ್ವಾಮಿ, ಕಾವೇರಿ ಬದಲಾಗಲ್ಲ, ಕನಿಷ್ಠ ಪಕ್ಷ ತಜ್ಞರನ್ನು ಬದಲಾಯಿಸಿ. ನಮ್ಮ ನಾಡಿನ ರೈತರಿಗೆ ನ್ಯಾಯ ಕೊಡಿಸಿ. ಇಲ್ಲ ಅಂದರೆ ಆ ಪದವನ್ನಾದರು ಬದಲಾಯಿಸಿ. ಎಷ್ಟು ವರ್ಷದಿಂದ ಅದೇ ಪದ, ಅದೇ ವಾಕ್ಯ ಕೇಳುವುದು. ಭಯದಿಂದಲೋ ಅಥವಾ ಜವಾಬ್ದಾರಿಯಿಂದಲೋ I stand with kaveri ಅಂತ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಕಾವೇರಿ ಯಾರ ಬಳಿ ಕೂಡ stand ಆಗಲ್ಲ. ಅದೇ ನಿಷ್ಠೆಯಿಂದ ಹರಿಯುತ್ತಲೇ ಇದ್ದಾಳೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಏನೇ ಇರಲಿ #istandwithkaveri ಎಂದು ಮಂಜು ಮಾಂಡವ್ಯ ಬರೆದುಕೊಂಡಿದ್ದಾರೆ.