ಟಾಲಿವುಡ್​ನಲ್ಲಿ ಶುರುವಾಯ್ತು ಗುರು-ಶಿಷ್ಯರ ಜಟಾಪಟಿ; ಅನ್​ಫಾಲೋ ಮಾಡಿದ ನಟಿ, ನಿರ್ದೇಶಕ ಟಾಂಗ್

Ravi Teja Ram Pothineni
Published on

ಹೈದರಾಬಾದ್: ಇತ್ತೀಚಿನ ವಷರ್ಗಳಲ್ಲಿ ಟಾಲಿವುಡ್​ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕೆಲವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದರೆ. ಇನ್ನೂ ಕೆಲವು ಚಿತ್ರಗಳು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುತ್ತವೆ. ಇದರ ನಡುವೆಯೇ ಸ್ಟಾರ್​ ನಟರ ಚಿತ್ರಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಗೆ ಸಜ್ಜಾಗಿದ್ದು, ಸ್ಟಾರ್​ವಾರ್​ಗೆ ನಾಂದಿ ಹಾಡಿದೆ.

ಕೋವಿಡ್​ ವೇಳೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಸ್ಟಾರ್​ ಹೀರೋಗಳ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವಂತಿಲ್ಲ. ಏಕೆಂದರೆ ಇದು ಬಾಕ್ಸ್​ಆಫೀಸ್​ ಮೇಲೆ ಪರಿಣಾಮ ಬೀರಲಿದ್ದು, ಸ್ಟಾರ್​ವಾರ್​ಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಸ್ಟಾರ್​ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವಂತಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಇದೀಗ ಎರಡು ದೊಡ್ಡ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಇದರಿಂದ ಚಿತ್ರರಂಗದಲ್ಲಿ ಸಮಸ್ಯೆ ಎದುರಾಗಿದೆ. ಇಬ್ಬರು ಸ್ಟಾರ್ ನಿರ್ದೇಶಕರು, ಇಬ್ಬರು ಸ್ಟಾರ್ ನಟರುಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದೇ ಕಾರಣಕ್ಕೆ ನಟಿಯೊಬ್ಬರು ಸ್ಟಾರ್ ನಟನನ್ನು ಸೋಷಿಯಲ್ ಮೀಡಿಯಾನಲ್ಲಿ ಅನ್​ಫಾಲೋ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಆಗಸ್ಟ್ 15 ರಂದು ಮಾಸ್ ಮಹಾರಾಜ ರವಿತೇಜ ನಟನೆಯ ಹರೀಶ್​ ಶಂಕರ್​ ನಿರ್ದೇಶನದ ಮಿ. ಬಚ್ಚನ್​ ಚಿತ್ರ ತೆರೆ ಕಾಣಲಿದೆ. ಅದೇ ದಿನ ರಾಮ್​ ಪೋತಿನೇನಿ ಅಭಿನಯದ ಪುರಿ ಜಗನ್ನಾಥ್​ ನಿರ್ದೇಶನದ ಡಬಲ್​ ಇಸ್ಮಾರ್ಟ್​ ಶಂಕರ್​ ಚಿತ್ರ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾಗಳು ಒಂದೇ ಜಾನರ್​ನ ಸಿನಿಮಾಗಳಾಗಿದ್ದು, ಒಂದೇ ದಿನ ಬಿಡುಗಡೆ ಆಗುತ್ತಿರುವುದರಿಂದ ಯಾವುದಾದರೂ ಒಂದು ಸಿನಿಮಾಕ್ಕೆ ಹೊಡೆತ ಬೀಳುವುದು ಪಕ್ಕಾ ಎಂದು ಸಿನಿಪಂಡಿತರು ಭವಿಷ್ಯ ನುಡಿದಿದ್ದಾರೆ.

Harish Puri Kaur

ಇನ್ನೂ ಈ ಕುರಿತು ಮಾತನಾಡಿರುವ ನಿರ್ದೇಶಕ ಹರೀಶ್​ ಶಂಕರ್, ಕೆಲವು ಆರ್ಥಿಕ ಕಾರಣಗಳಿಂದಾಗಿ ನಾವು ಆಗಸ್ಟ್ 15 ರಂದೇ ಸಿನಿಮಾ ಬಿಡುಗಡೆ ಮಾಡಬೇಕಿದೆ. ಒಟಿಟಿ ಬಿಡುಗಡೆ ಇನ್ನಿತರೆ ಒಪ್ಪಂದಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದು, ಒಂದೊಮ್ಮೆ ಸಿನಿಮಾ ಬಿಡುಗಡೆಯನ್ನು ತಡ ಮಾಡಿದರೆ ಸಿನಿಮಾಗೆ ಅರ್ಥಿಕ ಹೊಡೆತ ಬೀಳಲಿದೆ. ನನಗೆ ಪುರಿ ಜಗನ್ನಾಥ್​ ಅವರು ಗುರುವಿದ್ದಂತೆ. ಅವರಿಗೆ ಸವಾಲು ಹಾಕುವಷ್ಟು ನಾನು ಬೆಳೆದಿಲ್ಲ ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಪುರಿ ಅಸಮಾಧಾನಗೊಳ್ಳಲು ಕಾರಣವೇನು?

ಮಿ. ಬಚ್ಚನ್​ ಚಿತ್ರದ ನಿರ್ದೇಶಕ ಹರೀಶ್​ ಶಂಕರ್​ ಈ ಹಿಂದೆ ಪುರಿ ಜಗನ್ನಾಥ್​ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದಲ್ಲದೆ ನಟ ರವಿತೇಜ ನಾಯಕ ನಟನಾದ ಹೊಸದರಲ್ಲಿ ಪುರಿ ಜಗನ್ನಾಥ್​ ಅವರನ್ನು ಹಾಕಿಕೊಂಡು ಸಾಲು ಸಾಲು ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದರು. ಈಗ ತಮಗೆ ಎದುರಾಗಿ ಇವರಿಬ್ಬರು ನಿಂತಿರುವುದು ನಿರ್ದೇಶಕ ಪುರಿ ಜಗನ್ನಾಥ್​ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿದೆ.

ಇದಲ್ಲದೆ ಡಬಲ್​ ಇಸ್ಮಾರ್ಟ್​ ಶಂಕರ್​ ಚಿತ್ರಕ್ಕೆ ಪುರಿ ಜಗನ್ನಾಥ್​ ಹಾಗೂ ನಟಿ ಚಾರ್ಮಿ ಕೌರ್​ ಬಂಡವಾಳ ಹೂಡಿದ್ದು, ಈ ಹಿಂದೆ ತಮ್ಮದೇ ನಿರ್ದೇಶನ ಹಾಗೂ ನಿರ್ಮಾಣದ ಲೈಗರ್​ ಚಿತ್ರದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಪುರಿ ಹಾಗೂ ಚಾರ್ಮಿ ಯೋಜಿಸಿದ್ದು, ಈ ನಿಟ್ಟಿನಲ್ಲಿ ರವಿತೇಜ-ಹರೀಶ್​ ಶಂಕರ್​ ಕಾಂಬಿನೇಷನ್​ನ ಮಿ. ಬಚ್ಚನ್​ ಬಿಡುಗಡೆಗೆ ವಿರೋಧಿಸುತ್ತಿದ್ದಾರೆ. ಇದಲ್ಲದೆ ನಟಿ ಚಾರ್ಮಿ ಕೌರ್​ ರವಿತೇಜ ಹಾಗೂ ಹರೀಶ ಶಂಕರ್​ರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ಧಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net