ದೀದಿ ಪಕ್ಷ ಸೇರಿದ ಹಿರಿಯ ನಟ; ಸಿಎಂ ನನಗೆ ಅನೇಕ ಪ್ರಶಸ್ತಿ ಕೊಟ್ಟಿದ್ದಾರೆ ಎಂದ ನಾಯಕ!

tmc
Published on

ಕೋಲ್ಕತ: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷಕ್ಕೆ ನಾಯಕರು ಕೈ ಕೊಟ್ಟು ಹೊರಬರುತ್ತಿರುವ ಬೆನ್ನಲ್ಲೇ ಬಂಗಾಳಿಯ ಹಿರಿಯ ನಟರೊಬ್ಬರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಾನು ಪಕ್ಷದ ಪ್ರಾಮಾಣಿಕ ಬೆಂಬಲಿಗ ಎಂದು ಅವರು ಹೇಳಿಕೊಂಡಿದ್ದಾರೆ.

ಹಿರಿಯ ಬಂಗಾಳಿ ನಟ ದೀಪಂಕರ್ ದೇ ಶುಕ್ರವಾರ ಟಿಎಂಸಿ ಸೇರಿದ್ದಾರೆ. ಪಕ್ಷದ ಮುಖಂಡ ಮತ್ತು ಸಹ ನಟ ಬ್ರಾತ್ಯ ಬಸು ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿಕೊಂಡರು.

ಸತ್ಯಜಿತ್ ರೇ ಅವರ ಸೀಮಾಬಡ್ಡಾ ಚಿತ್ರದೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ದೀಪಂಕರ್ ದೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಅಪ್ಪಟ ಬೆಂಬಲಿಗರಾಗಿದ್ದಾರೆ. ಸತ್ಯಜಿತ್ ರೇ ನಿರ್ಮಿಸಿದ ಜನ ಆರಣ್ಯ, ಗಣಶಟ್ರು, ಶೇಖಾ ಪ್ರೊಶಾಖಾ ಮತ್ತು ಅಗಂತುಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದೀಪಂಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

"ನಾನು ಬಹಳಷ್ಟು ಸಮಯದಿಂದ ತೃಣಮೂಲ ಪಕ್ಷದ ಬೆಂಬಲಿಗನಾಗಿದ್ದೇನೆ. ನಮ್ಮ ಮುಖ್ಯಮಂತ್ರಿ ನನಗೆ ಬಂಗಾ ಭೂಷಣ್, ಬಂಗಾ ಬಿಭೂಷಣ್ ಗೌರವ ಪ್ರಶಸ್ತಿಗಳನ್ನು ನೀಡಿದ್ದಾರೆ. ನಾನು ತೃಣಮೂಲಕ್ಕೆ ಅಪ್ರಾಮಾಣಿಕನಾಗಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಟಿಎಂಸಿ ಗೆಲ್ಲುತ್ತದೆ" ಎಂದು ದೀಪಂಕರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net