ಸುಳ್ಳನ್ನು ಸತ್ಯ ಮಾಡುವುದೇ ಆರ್​ಎಸ್ಎಸ್ ಟ್ರೈನಿಂಗ್: ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್​ ಗರಂ

ವಿಜಯವಾಣಿ (59)
Published on

ಮಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರಾಸಿಕ್ಯೂಶನ್, ಕೋರ್ಟ್ ಅದೆಲ್ಲಾ ಜಡ್ಜ್ ತೀರ್ಮಾನ ಮಾಡ್ತಾರೆ. ಆದ್ರೆ, ರಾಜ್ಯಪಾಲರ ನಡೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಯಾವ ರೀತಿ ಪಕ್ಷಪಾತ ಮಾಡಿದ್ದಾರೆಂದು ಇಲ್ಲಿ ಸ್ಪಷ್ಟವಾಗಿದೆ ಎಂದರು.

"ಮುಖ್ಯಮಂತ್ರಿಗಳಿಗೆ ಕೇವಲ 12 ಗಂಟೆಯೊಳಗೆ ತರಾತುರಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಸಿಎಂ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ, ಭ್ರಷ್ಟಾಚಾರ ನಡೆಸಿಲ್ಲ. ಬಿಜೆಪಿಯವರು ಸುಮ್ಮನೆ ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು ದೇಶದಾದ್ಯಂತ ಪ್ರಯತ್ನ ಮಾಡ್ತಿದ್ದಾರೆ. ಸುಳ್ಳನ್ನು ಸತ್ಯ ಮಾಡೋದೆ ಆರ್​ಎಸ್ಎಸ್ ಟ್ರೈನಿಂಗ್ ಆಗಿದೆ. ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ ಎಬ್ಬಿಸಬೇಕು, ದಂಗೆ ಮಾಡಬೇಕೆಂಬ ತರಬೇತಿ ಕೊಡ್ತಾರೆ" ಎಂದು ಕಿಡಿಕಾರಿದರು.

"ಬಿಜೆಪಿ ಸಂಘ ಪರಿವಾರದಲ್ಲಿ ಇದಕ್ಕೆಂದೆ ತರಬೇತಿ ಇರುತ್ತದೆ. ಇದರಲ್ಲಿ ನಮಗೆ ಯಾವುದೇ ಭಯಭೀತಿ ಇಲ್ಲ. ಮುಖ್ಯಮಂತ್ರಿಗಳ ನಡೆ ಬಹಳ ಸ್ಪಷ್ಟವಾಗಿದೆ. ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ರಾಜ್ಯಪಾಲರು ಯಾವ ರೀತಿ ಈ ತೀರ್ಮಾನಕ್ಕೆ ಬಂದರು? ಅವರ ಉದ್ದೇಶವೇನು, ಎಲ್ಲವೂ ಒಂದು ಷಡ್ಯಂತ್ರ ಎಂಬುದು ಸ್ಪಷ್ಟವಾಗಿದೆ. ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರು. ಅವರೇ ಸರ್ಕಾರದ ವಿರುದ್ಧ ಷಡ್ಯಂತ್ರದಲ್ಲಿ ಭಾಗಿಯಾದರೆ ಏನೆಂದು ಕರೆಯೋದು" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net