

ಬೆಂಗಳೂರು: ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆಗೊಳಿಸಲಿದ್ದೇವೆ ಎಂದು ನೀಡಿದ ಹೇಳಿಕೆಯನ್ನು ಲೇವಡಿ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದು ಕಳ್ಳರೇ ಪೊಲೀಸರ ವಿರುದ್ಧ ತನಿಖೆ ಮಾಡಿದಂತೆ ಎಂದು ಹೇಳಿದ್ದಾರೆ.
"ನಮ್ಮ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತಾರಂತೆ. ಇದು ಕಳ್ಳರೇ ಪೊಲೀಸರ ವಿರುದ್ಧ ತನಿಖೆ ಮಾಡಿದಂತೆ. ಇದೆಂತಾ ಹಾಸ್ಯಾಸ್ಪದ? ಹಿಂದಿನ ಸರ್ಕಾರದ 40% ಕಮೀಷನ್ ಮತ್ತು ಕೋವಿಡ್ ಹಗರಣದ ತನಿಖೆಯನ್ನು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಈ ತನಿಖೆಯ ನಂತರ ಬೀಳಲಿರುವುದು ನಿಜವಾದ ಚಾರ್ಜ್‌ಶೀಟ್" ಎಂದು ಹೇಳಿದ್ದಾರೆ.
"ಮೊನ್ನೆ ಮೋದಿಯವರು ರಾಜ್ಯ ಬಿಜೆಪಿ ನಾಯಕರನ್ನು ಕಣ್ಣೆತ್ತಿಯೂ ನೋಡದೇ ಹೋಗಿದ್ದರು. ಇದು ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅಭದ್ರತೆಯ ಭಯ ಮೂಡಿಸಿದೆ. ಈಗ ಮೋದಿಯವರನ್ನು ಮೆಚ್ಚಿಸಲು ನಮ್ಮ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುವ ಬೀದಿ ನಾಟಕ ಶುರು ಮಾಡಿದ್ದಾರೆ. ಆದರೆ ಈ ನಾಟಕ ರಂಗ ತಾಲೀಮಿಲ್ಲದ ಅರೆಬೆಂದ ಕಲಾವಿದರ ನೀರಸ ಪ್ರದರ್ಶನವಾಗಲಿದೆ" ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.