

ಎನ್.ಆರ್.ಪುರ: ಪ್ರಸ್ತುತ ಅಂಚೆ ಕಚೇರಿ ರಫ್ತು ಕೇಂದ್ರದ ಮೂಲಕ ಯಾವುದೇ ವಸ್ತುಗಳನ್ನು ವಿದೇಶಕ್ಕೂ ರಪ್ತು ಮಾಡಬಹುದು ಎಂದು ಜಿಲ್ಲಾ ಅಂಚೆ ಅಧೀಕ್ಷಕ ಎನ್.ರಮೇಶ್ ತಿಳಿಸಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಮಂಗಳವಾರ ಇಲಾಖೆ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಒಂದೇ ಸೂರು, ನೂರು ಸೇವೆ ಅಭಿಯಾನದಡಿ ಅಂಚೆ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆ ಈಗ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಡಿಜಿಟಲ್ ಖಾತೆ ತೆರೆಯಬಹುದು. ಪಿಎಲ್‌ಐ ಹಾಗೂ ಆರ್‌ಪಿಎಲ್‌ಐ ಯೋಜನೆಗಳ ಮೂಲಕ ಇನ್ಶೂರೆನ್ಸ್ ಮಾಡಿಸಬಹುದು. ಪಿಪಿಎ್ ಖಾತೆ ಮೂಲಕ ಪ್ರತಿ ತಿಂಗಳು ಹಣ ಕಟ್ಟಬಹುದು. 15 ವರ್ಷದ ನಂತರ ಹಣ ವಾಪಸ್ ಬರಲಿದೆ. 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಇದೆ. ಅಂಚೆ ಇಲಾಖೆಯಲ್ಲಿ ಜನರು ಇಡುವ ಹಣ ಸುರಕ್ಷಿತವಾಗಿರುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಇದೆ. ಆನ್‌ಲೈನ್‌ನಲ್ಲೇ ವ್ಯವಹಾರ ಮಾಡಬಹುದು. ಸಿಎಸ್‌ಸಿ ಸೇವೆ ಲಭ್ಯವಿದೆ. ಇದನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಕೊಪ್ಪ ವಿಭಾಗದ ಅಂಚೆ ನಿರೀಕ್ಷಕ ಕುಮಾರ್ ಮಾತನಾಡಿ, ಗ್ರಾಹಕರ ಠೇವಣಿಗೆ ಅಂಚೆ ಇಲಾಖೆಯಲ್ಲಿ ಅತಿ ಹೆಚ್ಚು ಬಡ್ಡಿ ನೀಡುತ್ತಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣವನ್ನು ಲಾನುಭವಿಗಳು ಇರುವ ಜಾಗಕ್ಕೆ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಖಜಾಂಚಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಅಂಚೆ ಕಚೇರಿಯಲ್ಲಿ ಹಣಕ್ಕೆ ಭದ್ರತೆ ಇದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಯಿಂದ ಬರುವ ಪತ್ರಗಳನ್ನು ಓದುವುದೇ ಒಂದು ಸಂಭ್ರಮವಾಗಿತ್ತು. ಪ್ರಸ್ತುತ ಮೊಬೈಲ್, ಇಂಟರ್‌ನೆಟ್, ವಾಟ್ಸ್‌ಆ್ಯಪ್ ಬಂದ ಮೇಲೆ ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಬೇರೆ ಹಣಕಾಸಿನ ಸಂಸ್ಥೆಗಿಂತ ಅಂಚೆ ಕಚೇರಿಯಲ್ಲಿ ಹಣ ಇಟ್ಟರೆ ಭದ್ರತೆ ಜಾಸ್ತಿ. ಬಡ್ಡಿಯೂ ಹೆಚ್ಚು ಲಭಿಸುತ್ತದೆ ಎಂದು ಹೇಳಿದರು.
ಎನ್.ಆರ್.ಪುರ ಅಂಚೆ ಕಚೇರಿ ಅಂಚೆ ಅಧೀಕ್ಷಕ ಅರುಣಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್, ಪೂರ್ವಾಧ್ಯಕ್ಷ ಡಿ.ಸಿ.ದಿವಾಕರ, ಕಾರ್ಯದರ್ಶಿ ವಿದ್ಯಾನಂದಕುಮಾರ್ ಇದ್ದರು.