

ಜೀವನದಲ್ಲಿ ಕಷ್ಟಗಳು ಒಂದೇ, ಎರಡೇ? ನೂರಾರು! ಸಾವಿರಾರು! ಇದು ಬಹುತೇಕರ ಅನುಭವ. ಆದರೆ ಈ ಕಷ್ಟಗಳಿಗೆ ಹೆದರುವ ಬದಲು ಸ್ವಲ್ಪ ತಾಳ್ಮೆ, ಸಹನೆಯಿಂದ ಆಲೋಚಿಸಿದರೆ ಕಷ್ಟಗಳೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಇತಿಹಾಸವನ್ನು ನಿರ್ವಿುಸಿರುವ ವ್ಯಕ್ತಿಗಳು ಕಷ್ಟಗಳನ್ನು ಎದುರಿಸುತ್ತಾ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಸ್ವಾಮಿ ವಿವೇಕಾನಂದ, ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ಚೆನ್ನಮ್ಮ ಮುಂತಾದವರೇ ಜ್ವಲಂತ ನಿದರ್ಶನವಾಗಿದ್ದಾರೆ.
ಒಮ್ಮೆ ದೇವಸ್ಥಾನದಲ್ಲಿ ದೇವರ ಕಲ್ಲಿನ ವಿಗ್ರಹ, ಕಂಬಗಳು ಹಾಗೂ ಚಪ್ಪಡಿಗಳು ಮಾತನಾಡಲು ಪ್ರಾರಂಭಿಸಿದವು. ಕಲ್ಲಿನ ಚಪ್ಪಡಿಯು ಹೇಳಿತು, ನಾವೆಲ್ಲರೂ ಒಂದೇ ತಾಯಿ ಬೆಟ್ಟದ ಮಕ್ಕಳು. ಆದರೆ ನನ್ನನ್ನು ಜನರು ತುಳಿಯುತ್ತಿದ್ದಾರೆ. ನನ್ನ ಅಕ್ಕನಾದ ಕಲ್ಲಿನ ಕಂಬಕ್ಕೆ ಎಂಜಲು ಕೈ ಒರೆಸಿ ಹೋಗುತ್ತಾರೆ. ಇನ್ನು ನನ್ನ ತಂಗಿಯಾದ ಗರ್ಭಗುಡಿಯಲ್ಲಿರುವ ಕಲ್ಲಿನ ವಿಗ್ರಹಕ್ಕೆ ಅಭಿಷೇಕ, ಅರ್ಚನೆ, ಸಕಲ ಗೌರವ, ಮರ್ಯಾದೆ. ಜನರು ಎಷ್ಟು ಭೇದ-ಭಾವ ಮಾಡುತ್ತಾರೆ, ಅಲ್ಲವೇ? ಎಂದಿತು.
ಆಗ ದೇವರ ವಿಗ್ರಹದ ಕಲ್ಲು ನಗುತ್ತಾ ಹೀಗೆ ಹೇಳಿತು, ನಿಜ. ನಾವೆಲ್ಲ ಒಂದೇ ತಾಯಿ ಬೆಟ್ಟದ ಮಕ್ಕಳು. ಆದರೆ ಶಿಲ್ಪಕಾರನು ಒಂದೆರಡು ಏಟುಗಳನ್ನು ಹೊಡೆದಾಗ, ನೀನು ಆ ನೋವನ್ನು ತಾಳಲಾರದೆ ಅಯ್ಯೋ ಎಂದು ಬಿರುಕುಬಿಟ್ಟೆ. ಆದ್ದರಿಂದ ನಿನ್ನನ್ನು ಚಪ್ಪಡಿಗಳನ್ನಾಗಿ ಮಾಡಿದರು. ಕೆಲವು ಏಟುಗಳನ್ನು ತಿಂದ ಇನ್ನೊಬ್ಬ ಸಹೋದರಿ ಸಾಧ್ಯವಿಲ್ಲ ಎಂದು ಬಾಯಿಬಿಟ್ಟಳು. ಆಗ ಬಂಡೆ ಬಿರುಕುಬಿಟ್ಟಿತು. ಆ ಬಂಡೆಯನ್ನು ಕಲ್ಲಿನ ಕಂಬಗಳನ್ನಾಗಿ ಶಿಲ್ಪಕಾರನು ರೂಪಿಸಿದನು.
ನೂರಾರು, ಸಾವಿರಾರು ಏಟುಗಳನ್ನು ನನ್ನ ಮೇಲೆ ಹೊಡೆದರೆ, ನಾನು ನಗುತ್ತಾ ತಡೆದುಕೊಂಡೆ. ಆದ್ದರಿಂದ ಶಿಲ್ಪಕಾರನು ನನ್ನನ್ನು ಸುಂದರವಾದ ಮೂರ್ತಿಯನ್ನಾಗಿ ರೂಪಿಸಿ, ಗರ್ಭಗುಡಿಯಲ್ಲಿ ಇರಿಸಿದ್ದಾನೆ ಎಂದು. ಕಷ್ಟಗಳು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಕಷ್ಟಗಳಿಗೆ ಹೆದರಬಾರದು, ಅದನ್ನು ಬದಿಗೊತ್ತಿ ಮುಂದೆ ಸಾಗಬೇಕು. ಈ ಪ್ರಪಂಚವು ಒಂದು ಗರಡಿ ಮನೆಯಂತೆ. ಇಲ್ಲಿ ನಾವು ಶಕ್ತಿವಂತರಾಗಲು ಬಂದಿದ್ದೇವೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.