

ಶಿರಾಳಕೊಪ್ಪ: ಇಲ್ಲಿಯ ಪುರಸಭೆ ಮತದಾರರಿಗೆ ಜಾಗೃತಿ ಮೂಡಿಸಲು ಪ್ರಾರಂಭದಲ್ಲಿ ಮತದಾನ ಮಾಡಿದ 400 ಜನರಿಗೆ ಸಸಿಯನ್ನು ವಿತರಿಸಿತು. ಶಿರಾಳಕೊಪ್ಪ ಸುತ್ತಮುತ್ತಲ ಗ್ರಾಮಗಳಾದ ಬೆಲವಂತನಕೊಪ್ಪ, ತಡಗಣಿ, ಬಳ್ಳಿಗಾವಿಯಲ್ಲಿ ಮತದಾನ ಶಾಂತಯುತವಾಗಿ ನಡೆಯಿತು.
ತೊಗರ್ಸಿ ಗ್ರಾಪಂ ವ್ಯಾಪ್ತಿಯ ಶಿಡ್ಡಿಹಳ್ಳಿ ಗ್ರಾಮದ ಒಂದು ವಗರ್ದ ಹಿಂದುಳಿದ ಜನಾಂಗ ಗ್ರಾಮದ ಭೂವಿವಾದಕ್ಕೆ
ಸಂಬಂಧಿಸಿದಂತೆ 110 ಮತದಾರರು ಮತಹಾಕದೆ ಬಹಿಷ್ಕರಿಸಿದ್ದಾರೆ. ಒಟ್ಟು ಗ್ರಾಮದಲ್ಲಿ 206 ಮತಗಳಿದ್ದು ಒಂದು ಕೋಮಿನ ಜನರನ್ನು ಬಿಟ್ಟರೆ ಉಳಿದ 90 ಜನರು ಬಂದು ಮತ ಹಾಕಿ ಹೋಗಿದ್ದಾಗಿ ರಾಜಕೀಯ ಪಕ್ಷದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಪ್ರಥಮ ಬಾರಿಗೆ ಮತದಾನ ಮಾಡಿದ ಶಿರಾಳಕೊಪ್ಪದ ರಮ್ಯ ಮತ್ತು ಅಂಕಿತಾ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನೆಹರು ಕಾಲನಿ ನಿವಾಸಿ ಮುಂಗಲಗಿ ಸೋಮಣ್ಣ ಬಹಳ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ ಸ್ವಲ್ಪ ಸಮಯದಲ್ಲಿ ದೈವಾಧೀನರಾಗಿದ್ದಾರೆ.