ಭ್ರಷ್ಟಾಚಾರಿ ಕಾಂಗ್ರೆಸ್ ದನದ ಸೆಗಣಿಯನ್ನೂ ಬಿಡುತ್ತಿಲ್ಲ: ಪ್ರಧಾನಿ ಮೋದಿ

PM Modi
Published on

ಛತ್ತೀಸ್​ಗಢ: ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್​ನ ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಇಂದು ಛತ್ತೀಸ್​ಗಢದಲ್ಲಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ನ ಭ್ರಷ್ಟಾಚಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್​ಘಡದಲ್ಲಿ ಬಿಲಾಸ್​ಪುರದಲ್ಲಿ ನಡೆದ ಪರಿವರ್ತನ್ ಮಹಾಸಂಕಲ್ಪ್ ಎಂಬ ರ್ಯಾಲಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಇಲ್ಲಿನ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಕೇಂದ್ರ ಸರ್ಕಾರ ಎಷ್ಟೇ ಅನುದಾನ/ಯೋಜನೆ ನೀಡಿದ್ದರೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅದನ್ನು ಜನರಿಗೆ ತಲುಪಿಸುತ್ತಿಲ್ಲ ಎಂದರು.

ನಿಮ್ಮ ಎಲ್ಲ ಕನಸುಗಳೇ ನನ್ನ ನಿರ್ಣಯ ಎಂಬುದು ನಾನು ನಿಮಗೆ ನೀಡುತ್ತಿರುವ ಗ್ಯಾರಂಟಿ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ನಿಮ್ಮ ಎಲ್ಲ ಕನಸುಗಳು ನನಸಾಗುತ್ತವೆ. ನಾವು ದೆಹಲಿಯಿಂದ ಅದೆಷ್ಟೇ ಪ್ರಯತ್ನಪಟ್ಟರೂ ನಮ್ಮ ಪ್ರಯತ್ನಗಳನ್ನು ಇಲ್ಲಿನ ಕಾಂಗ್ರೆಸ್ ವಿಫಲಗೊಳಿಸುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ಕಾಂಗ್ರೆಸ್​ನ ಭ್ರಷ್ಟಾಚಾರ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಮದ್ಯದಲ್ಲೂ ಹಗರಣ ನಡೆಸಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಛತ್ತೀಸ್​ಗಢಕ್ಕೆ ನೀಡಿದ ಪಡಿತರದಲ್ಲೂ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್, ದನದ ಸೆಗಣಿಯನ್ನೂ ಬಿಡುತ್ತಿಲ್ಲ ಎಂದರು.

ಛತ್ತೀಸ್​ಗಢ ಮಾತ್ರವಲ್ಲದೆ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಈ ವರ್ಷದ ಅಂತ್ಯದ ವೇಳೆ ವಿಧಾನಸಭಾ ಚುನಾವಣೆ ನಡೆಯಲಿದೆ. 2018ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಬಿಜೆಪಿಯನ್ನು ಕೆಳಗಿಳಿಸಿ ಅಧಿಕಾರವನ್ನು ತನ್ನ ಕೈಗೆ ಪಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net