

Pooja Hegde: ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’, ‘ಹೌಸ್ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಸೌತ್ ಬ್ಯೂಟಿ, ನಟಿ ಪೂಜಾ ಹೆಗ್ಡೆ ಅದ್ಯಾಕೋ ತೆಲುಗು ಚಿತ್ರರಂಗದಿಂದ ಕೊಂಚ ದೂರ ಉಳಿದಂತೆ ಕಂಡುಬಂದಿದೆ. ಪ್ರಸ್ತುತ ಬಾಲಿವುಡ್, ತಮಿಳು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಪೂಜಾ, ಕಳೆದ ವರ್ಷ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯದೆ, ಟಾಪ್ ನಟಿಯರ ಸಾಲಿನಿಂದ ಬಹಳ ದೂರ ಉಳಿದಿದ್ದರು.
2024ರಲ್ಲಿ ತೆರೆಕಂಡ ಮಹೇಶ್ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದೇ ತಡ, ಅಲ್ಲಿಂದ ನಟಿಯ ಅವಕಾಶಗಳು ಕುಂಠಿತವಾಯಿತು. ಸಂಭಾವನೆ ವಿಚಾರಕ್ಕೆ ಚಿತ್ರತಂಡದಿಂದ ಹೊರಗುಳಿದ ಪೂಜಾ, ಅದಾದ ನಂತರ ಆ ವರ್ಷದಲ್ಲಿ ನಟಿಸಿದ ಯಾವ ಚಿತ್ರಗಳು ತೆರೆಗೆ ಬರಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತು. 2024ರಿಂದ 2025ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪೂಜಾ ಲಕ್ ಬದಲಾಗಿದ್ದು, ನಟಿ ಅಭಿನಯದ ಹಲವು ಸಿನಿಮಾಗಳು ಇದೇ ವರ್ಷ ತೆರೆಕಾಣಲು ಸಿದ್ಧವಾಗಿದೆ. ಇದು ಅಭಿಮಾನಿಗಳಲ್ಲಿ ಖುಷಿ ತಂದಿದ್ದೇ ಆದರೂ ಅವುಗಳ ಪೈಕಿ ಬಹುತೇಕ ತಮಿಳು ಚಿತ್ರಗಳೇ ಆಗಿರುವುದು ಕೊಂಚ ಬೇಸರ ತಂದಿದೆ.
ತಮಿಳು ಸೂಪರ್ಸ್ಟಾರ್, ತಲೈವಾ ನಟ ರಜನಿಕಾಂತ್ ಅಭಿನಯನದ ಹಾಗೂ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಕೂಲಿ' ಚಿತ್ರದಲ್ಲಿ ಪೂಜಾ ಹೆಗ್ಡೆ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಂತೆ ಕಾಲಿವುಡ್ನಲ್ಲಿ ಈಗಾಗಲೇ ಹಲವು ಸುದ್ದಿಗಳು ಬಂದಿವೆ. ಕೇವಲ ಕೂಲಿ ಚಿತ್ರದಲ್ಲಿ ಮಾತ್ರ ಪೂಜಾ ಬಣ್ಣ ಹಚ್ಚುತ್ತಿದ್ದಾರೆ ಎಂದುಕೊಂಡಿದ್ದ ನಟಿಯ ಟಾಲಿವುಡ್ ಫ್ಯಾನ್ಸ್, ಅವರ ಚಿತ್ತ ತಮಿಳು ಚಿತ್ರರಂಗದತ್ತ ವಾಲಿದೆ ಎಂಬ ಸಂಗತಿ ತಿಳಿದು ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಅವರ ಮುಂಬರುವ ಸಾಲಿ ಸಾಲು ತಮಿಳು ಚಿತ್ರಗಳು.
ಈಗಾಗಲೇ 'ರೆಟ್ರೋ' ಚಿತ್ರದಲ್ಲಿ ತಮಿಳು ನಟ ಸೂರ್ಯಗೆ ನಾಯಕಿಯಾಗಿರುವ ಪೂಜಾ, ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಇದರ ನಂತರದಲ್ಲಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರಕ್ಕೂ ಅವರೇ ನಾಯಕಿಯಾಗಿದ್ದಾರೆ. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದು, ರಿಲೀಸ್ ದಿನಾಂಕಗಳ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಇದರೊಟ್ಟಿಗೆ ನಟ ರಾಘವ್ ಲಾರೆನ್ಸ್ ಅಭಿನಯದ 'ಕಾಂಚಾನ 4' ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಕಾಲಿವುಡ್ನಲ್ಲಿ ಸಖತ್ ಬಿಜಿಯಾಗಿರುವ ಪೂಜಾ ಹೆಗ್ಡೆ ಏಕೆ ತೆಲುಗು ಚಿತ್ರರಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ? ಯಾವ ಒಂದು ತೆಲುಗು ಚಿತ್ರವನ್ನು ಕೈಗೆತ್ತಿಕೊಂಡಿಲ್ಲ? ಇದು ಟಾಲಿವುಡ್ಗೆ ಗುಡ್ಬೈ ಹೇಳಿರುವ ಮುನ್ಸೂಚನೆಯೇ ಎಂಬ ಹತ್ತಾರು ಪ್ರಶ್ನೆಗಳನ್ನು ಜಾಲತಾಣಗಳಲ್ಲಿ ಮುಂದಿಟ್ಟಿದ್ದಾರೆ. ಅವರ ಕಾಲಿವುಡ್ ಪಯಣ ಕುರಿತು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ತೆಲುಗು ನಿರ್ದೇಶಕರು ಅವರನ್ನು ಸಂಪರ್ಕಿಸುತ್ತಿಲ್ಲವೇ ಅಥವಾ ಅವರಿಗೇ ಕಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇದೆಯೇ? ಎಂಬುದು ಸದ್ಯ ತೆಲುಗು ಪ್ರೇಕ್ಷಕರ ಪ್ರಶ್ನೆಯಾಗಿದೆ,(ಏಜೆನ್ಸೀಸ್).