

ವಿಜಯಪುರ: ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿದ ಪದಾಧಿಕಾರಿಗಳು ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಅಣೆಕಟ್ಟಿಗೆ ಆಲಮಟ್ಟಿ ಲಾಲಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ 1.27 ಟಿಎಂಸಿ ನೀರು ಹರಿಸಲಾಗಿದೆ. ಇದರಿಂದ ಜಿಲ್ಲೆಯ ಜನರಿಗೆ ತೊಂದರೆಯುಂಟಾಗಲಿದೆ. ಬೇಸಿಗೆ ಸಂದರ್ಭದಲ್ಲಿಯೇ ನೀರು ಹರಿಸುವ ಮೂಲಕ ರಾಜ್ಯದ ಜನತೆಗೆ ಸಂಕಷ್ಟಕ್ಕೆ ಸಿಲುಕಿಸಿರುವ ಈ ಸರ್ಕಾರ ನಮ್ಮ ಪಾಲಿಗೆ ಸತ್ತು ಹೋಗಿದೆ ಎಂದರು.
ನಮಗೆ ಕುಡಿಯಲು ನೀರಿಲ್ಲ. ಸದ್ಯ ಅಣೆಕಟ್ಟೆಯಲ್ಲಿ ಕೇವಲ 33 ಟಿಎಂಸಿ ಮಾತ್ರ ನೀರು ಉಳಿದಿದೆ. ಇದರಲ್ಲಿ ಕೈಗಾರಿಕೆ ಉದ್ದೇಶಕ್ಕೆ, ಜಲಚರ, ಜನ ಹಾಗೂ ಜಾನುವಾರುವಿಗೆ, ರೈತರಿಗೆ ನೀರು ಮೀಸಲಿರಿಸಬೇಕು. ಇರುವ ಅಲ್ಪಸ್ವಲ್ಪ ನೀರಿನಲ್ಲಿ 5 ಟಿಎಂಸಿ ನೀರು ಹರಿಸಲು ತೆಲಂಗಾಣ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರು ದೊಡ್ಡ ಮಾನವೀಯತೆ ತೋರಿಸಿ ತೆಲಂಗಾಣ ಸರ್ಕಾರವನ್ನು ಮೆಚ್ಚಿಸಲು ಒಂದೇ ಪಕ್ಷದ ಮುಖ ನೋಡಿ ನೀರು ಹರಿಸಿ ನಮ್ಮ ಜಿಲ್ಲೆಯ ರೈತರಿಗೆ ಗೋರಿ ತೋಡಲು ಹೊರಟಿದೆ ಎಂದರು.
ಈ ಹಿಂದೆ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ ನ್ಯಾಯಾಧೀಕರಣ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 524.256 ಕ್ಕೆ ನೀರು ನಿಲ್ಲಿಸಲು ಅನುಮತಿ ಕೊಟ್ಟಾಗ ಸುಮ್ಮನಿರದ ತೆಲಂಗಾಣ ಸರ್ಕಾರ ಟ್ರಿಬ್ಯುನಲ್ ಆದೇಶದ ವಿರುದ್ಧ ಸುಪ್ರೀಂ ಕೋಟ್ ಗೆರ್ ಮೇಲ್ಮನವಿ ಸಲ್ಲಿಸಿ ಅಣೆಕಟ್ಟೆ ನೀರಿನ ಮಟ್ಟ ಎತ್ತರಿಸಲು ತಡೆಯಾಜ್ಞೆ ತಂದು ಅನ್ಯಾಯ ಮಾಡಿದೆ. ಇದೀಗ ಅವರಿಗೆ ಆಲಮಟ್ಟಿ ನೀರಿನ ನೆನಪಾಯಿತೇ? ತೆಲಂಗಾಣ ಸರ್ಕಾರದ ಮನವಿಗೆ ಮಣೆಹಾಕಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತೆಲಗಾಂಣ ರಾಜ್ಯದ ಮೇಲೆ ಅಷ್ಟೊಂದು ಅಕ್ಕರೆ ಇದ್ದರೆ ನಮ್ಮ ರಾಜ್ಯದಲ್ಲಿ ರಾಜಕಾರಣ ತೊರೆದು ತೆಲಂಗಾಣ ರಾಜ್ಯದಲ್ಲಿಯೇ ಚುನಾವಣೆಗೆ ಸ್ಪರ್ಧೆಮಾಡಲಿ. ಅದನ್ನು ಬಿಟ್ಟು ಮುಂಬರುವ ಚುನಾವಣೆಯಲ್ಲಿ ಮತ್ತೆ ನಮ್ಮ ಕರ್ನಾಟಕದಲ್ಲಿಯೇ ಸ್ಪರ್ಧೆ ಮಾಡಿದರೆ ಕರ್ನಾಟಕದಿಂದ ಇವರನ್ನು ಗಡಿಪಾರು ಮಾಡಬೇಕೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ವಿಠಲ ಬಿರಾದಾರ, ರಾಜೇಸಾಬ ವಾಲಿಕಾರ, ಗುರಲಿಂಗಪ್ಪ ಪಡಸಲಗಿ, ದಾವಲಸಾಬ ನದಾಫ್, ಚನಬಸಪ್ಪ ಸಿಂಧೂರ, ಗಿರಮಲ್ಲಪ್ಪ ದೊಡಮನಿ, ಹಣಮಂತರಾಯ ಕಲಬುರಗಿ, ಬಸವರಾಜ ಮಾಡ್ಯಾಳ, ಲಾಲಸಾಬ ಹಳ್ಳೂರ, ಶಿವಶರಣ ನಾಗರೆಡ್ಡಿ, ಆನಂದ ನಾಗರೆಡ್ಡಿ, ಸಾಹೇಬಗೌಡ ಹೊಸೂರ, ಮುದಕಪ್ಪಗೌಡ ಸರೂರ, ಪರಶುರಾಮ ಹೊಸೂರ, ಹಣಮಂತ ವಾಲೀಕಾರ, ಬಸವರಾಜ ನಾಗರೆಡ್ಡಿ, ಯಮನೂರಪ್ಪ ಮಾದರ, ಮಾರುತಿ ಹೂಗಾರ, ಸೋಮೇಶ ನಾಗರೆಡ್ಡಿ, ಹಣಮಂತರಾಯ ಹೂಗಾರ, ಶೇಖಪ್ಪ ಮಾದರ, ಶರಣು ವಾಲಿಕಾರ, ಕಿರಣ ನಾಟೀಕಾರ, ಗುರಲಿಂಗಯ್ಯ ತೆಗ್ಗಿನಮಠ, ಕಾಸೀನಾಥ ಬಿರಾದಾರ, ಮಡಿವಾಳಪ್ಪ ನಾಗರೆಡ್ಡಿ, ಪರಸು ಹೊಸೂರ, ಮಲಿಗೆಪ್ಪ ಸಾಸನೂರ, ಮಂಜುನಾಥ ಸಜ್ಜನ, ಶ್ರೀಶೈಲ ಹೊಸೂರ, ಶಿವು ನಾಗರೆಡ್ಡಿ, ಮಾರುತಿ ಹೂಗಾರ ಮತ್ತಿತರರಿದ್ದರು.