ಎಂಟು ವರ್ಷಗಳಿಂದ ಕರೊನಾವನ್ನು ಪೋಷಿಸುತ್ತಿತ್ತಾ ಚೀನಾ...?

china
Published on

ನವದೆಹಲಿ: ಕರೊನಾ ವೈರಸ್​ನಿಂದ ಪಾರಾಗುವುದು ಹೇಗೆ ಇಡೀ ಜಗತ್ತು ಚಿಂತಾಕ್ರಾಂತವಾಗಿದೆ. ಈ ನಡುವೆಯೇ ಸ್ಫೋಟಕ ಸುದ್ದಿಯೊಂದು ಹೊರ ಬಿದ್ದಿದೆ.

ಥಾಯ್ಲೆಂಡ್​ನಲ್ಲಿ ಸದ್ಯ ವಿವಿಧ ಜಾತಿಗಳ ಬಾವಲಿಗಳ ಮೇಲೆ ಸಂಶೋಧನೆ ನಡೆಸಲಾಗುತ್ತಿದೆ. ಅಂದರೆ ಈ ವೈರಸ್​ ಹರಡಿದ್ದು, ಬಾವಲಿಗಳಿಂದಲೇ ಎಂಬುದನ್ನು ತಿಳಿಯಲಾಗುತ್ತಿದೆ. ಇದಕ್ಕಾಗಿ ಗುಹೆಗಳಲ್ಲಿರುವ ಬಾವಲಿಗಳನ್ನು ಹಿಡಿದು, ಅದರ ಮಲದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಫಲಿತಾಂಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಆದರೆ, ಅದಕ್ಕೂ ಮುನ್ನ ಚೀನಾದಿಂದಲೇ ಮತ್ತೊಂದು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ನ್ಯೂಯಾರ್ಕ್​ನ ಬಯೋಸೈನ್ಸ್​ ಯೋಜನೆಯ ತಜ್ಞರು ಈ ಸತ್ಯವನ್ನು ಬಯಲಿಗೆಳೆದಿದ್ದಾರೆ. ಅದೇನೆಂದರೆ, ಚೀನಾದಲ್ಲಿ ಎಂಟು ವರ್ಷಗಳ ಹಿಂದೆಯೇ ಕರೊನಾ ವೈರಸ್​ ಪತ್ತೆಯಾಗಿತ್ತು....!

ವುಹಾನ್​ನಿಂದ ಒಂದು ಸಾವಿರ ಕಿ.ಮೀ. ದೂರ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದಲ್ಲಿ ಈ ವೈರಸ್​ ಪತ್ತೆಯಾಗಿತ್ತು ಎನ್ನಲಾಗಿದೆ. ಇಲ್ಲಿನ ಗಣಿಗಳಲ್ಲಿ ಬಾವಲಿಗಳ ಮಲ ಸ್ವಚ್ಛಗೊಳಿಸುತ್ತಿದ್ದ ಆರು ಕಾರ್ಮಿಕರಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು. ಮೂವರು ಅಲ್ಲಿಯೇ ಮೃತಪಟ್ಟಿದ್ದರು. ಈಗ ಕರೊನಾ ಸೋಂಕಿತರಲ್ಲಿ ಕಂಡುಬರುತ್ತಿರುವ ಲಕ್ಷಣಗಳೇ ಅವರೆಲ್ಲರೂ ಕಂಡುಬಂದಿದ್ದವು.

ಈ ಕಾರ್ಮಿಕರ ರಕ್ತ, ಗಂಟಲು ದ್ರವದ ಮಾದರಿಯನ್ನು ವುಹಾನ್​ ವೈರಾಣುಶಾಸ್ತ್ರ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ವಿಶ್ವಕ್ಕೆ ಈ ವೈರಸ್​ ಹರಡಿದ್ದು ಚೀನಾದ ವುಹಾನ್​ನಿಂದ ಎಂಬುದನ್ನು ಸ್ವತ: ಆ ದೇಶವೇ ಒಪ್ಪಿಕೊಂಡಿದೆ....!

ಅಂದರೆ, ಕಳೆದ ಎಂಟು ವರ್ಷಗಳಿಂದ ಚೀನಾ ಕರೊನಾ ವೈರಸ್​ಗಳನ್ನು ಪೋಷಣೆ ಮಾಡುತ್ತಿತ್ತೆ? ಈ ವೈರಸ್​ ಆಕಸ್ಮಿಕವಾಗಿ ಲ್ಯಾಬ್​ನಿಂದ ಸೋರಿಕೆಯಾಗಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ಚೀನಾ ಈ ವೈರಸ್​ ಬಿಡುಗಡೆ ಮಾಡಿದಿಯೇ? ಎಂಬ ಪ್ರಶ್ನೆಯೀಗ ಇಡೀ ಜಗತ್ತನ್ನು ಕಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net