

ಬೆಂಗಳೂರು: ನಾಲ್ಕು ತಿಂಗಳ ವೇತನ ಪಾವತಿ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಸಮಸ್ಯೆ ಪರಿಹರಿಸಲು ಸಚಿವರು ಹಾಗೂ ಅಧಿಕಾರಿಗಳು ಗಮನಹರಿಸದ ಕಾರಣ ಪ್ರತಿಭಟನೆ ತೀವ್ರಗೊಂಡಿದೆ.
ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಮನವಿ ಸ್ವೀಕರಿಸಿ, ಶುಕ್ರವಾರ ಆರೋಗ್ಯ ಸಚಿವರೊಂದಿಗೆ ಸಭೆ ಏರ್ಪಡಿಸುವ ಭರವಸೆ ನೀಡಿದ್ದರು. ಆದರೆ ಶುಕ್ರವಾರ ಅಧಿಕಾರಿಗಳಾಗಲಿ, ಸಚಿವರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾಗ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡ ನಂತರವೂ ವೇತನ ಪಾವತಿಯಾಗಿಲ್ಲ. ಹಾಗಾಗಿ ನಾವು ಮೌಖಿಕ ಭರವಸೆಗೆ ಮಣಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರೊಂದಿಗೆ ಸಭೆ ಏರ್ಪಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು, ಸಚಿವರು ಊರಿನಲ್ಲಿಲ್ಲ. ಆರೋಗ್ಯ ಸೌಧದಲ್ಲಿ ಚರ್ಚಿಸೋಣ ಬನ್ನಿ ಎಂದು ಫೋನ್ ಮಾಡಿ ಕರೆದರು. ಪ್ರತಿ ಬಾರಿ ಇದೇ ರೀತಿ ಸುಳ್ಳು ಭರವಸೆ ನೀಡುತ್ತಿರುವುದರಿಂದ ಚರ್ಚೆಗೆ ಹೋಗಲಿಲ್ಲ. ಸಚಿವರೊಂದಿಗೆ ಸಭೆ ಆಯೋಜಿಸಿ ಬೇಡಿಕೆಗಳ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡಬೇಕು. ಬಾಕಿ ವೇತನ ಸಂಪೂರ್ಣ ಪಾವತಿಸಬೇಕು, ಅಲ್ಲಿಯವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಿಬ್ಬಂದಿ ವಿಜಯವಾಣಿಗೆ ತಿಳಿಸಿದರು.
ಸಚಿವರು ಹೇಳೋದೇನು? ಆರೋಗ್ಯ ಸಚಿವನಾದ ಬಳಿಕ ಡಯಾಲಿಸಿಸ್ ಸೇವೆ ಬಲಪಡಿಸುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ. ಬಿಆರ್‌ಎಸ್ ಹಾಗೂ ಎಸ್ಕಾಗ್ ಸಂಜೀವಿನಿ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಪಿಎ್, ಇಎಸ್‌ಐ ಹಾಗೂ ವೇತನವನ್ನು ಆರ್ಥಿಕ ಇಲಾಖೆ ಅನುಮತಿ ಪಡೆದ ನಂತರ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ಇದಲ್ಲದೆ ಈ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ನಿಟ್ಟಿನಲ್ಲೂ ಇಲಾಖೆ ಕ್ರಮವಹಿಸಿದೆ. ಹಾಗಾಗಿ ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಏಕ ಬಳಕೆಯ ಡಯಾಲಿಸಿಸ್: ಡಯಾಲಿಸಿಸ್ ಸೇವೆಯನ್ನು ಸದೃಢಗೊಳಿಸಲು ಈಗಾಗಲೆ 173 ಇದ್ದ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ದಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 800 ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರಿಂದ ಗುಣಮಟ್ಟದ ಜತೆಗೆ ಸೋಂಕುರಹಿತ ಸೇವೆ ದೊರೆಯಲಿದೆ. ಕೇಂದ್ರಗಳ ನಿರ್ವಹಣೆ ಸಂಬಂಧ ನಾಲ್ಕು ವಿಭಾಗವಾರು ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರು ವಿಭಾಗದಲ್ಲಿ 250, ಮೈಸೂರು 222, ಬೆಳಗಾವಿ 201 ಹಾಗೂ ಕಲಬುರ್ಗಿ ವಿಭಾಗದಲ್ಲಿ 127 ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಮಾಧ್ಯಮಗಳಿಗೆ ಸಚಿವರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಹೇಳೋದೇನು? ಸಚಿವರಾಗಲಿ, ಅಧಿಕಾರಿಗಳಾಗಲಿ ನಮ್ಮ ಬಳಿ ಬಂದಿಲ್ಲ. ಮಾಧ್ಯಮದಲ್ಲಿ ಹಾಗೂ ಖುದ್ದು ಲಿಖಿತ ಭರವಸೆ ಕೋಟ್ಟರೂ ಯಾವುದೇ ಪ್ರಯೋಜನವಿಲ್ಲ. ಆರ್ಥಿಕ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಹಣ ಬಿಡುಗಡೆ ಮಾಡುವುದು ಯಾವಾಗ? ಅಲ್ಲಿಯವರೆಗೂ ನಮ್ಮ ಕುಟುಂಬ ನಿರ್ವಹಣೆ ಹೇಗೆ? ಬಾಕಿ ಸಂಬಳ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.