ಶಿಶುವಿನ ಚಿಕಿತ್ಸೆಗೆ ಧರ್ಮಸ್ಥಳದಿಂದ ಧನಸಹಾಯ

29-MDG-2P1
ಹಳೇಮೂಡಿಗೆರೆ ಗ್ರಾಮದ ಸುಮಿತ್ರಾ ಅವರಿಗೆ ಧನಸಹಾಯದ ಮಂಜೂರಾತಿ ಪತ್ರ ನೀಡಲಾಯಿತು. ಪಿ.ಶಿವಾನಂದ, ಪ್ರವೀಣ್ ಪೂಜಾರಿ, ರವಿ ಪೂಜಾರಿ, ಬಬಿತಾ, ದಾಮೋದರ್, ಕಲಾದೇವಿ ಇತರರಿದ್ದರು.
Published on

ಮೂಡಿಗೆರೆ: ಹಳೇಮೂಡಿಗೆರೆ ಗ್ರಾಮದ ಸುಮಿತ್ರಾ ಎಂಬುವವರ 3 ತಿಂಗಳ ಶಿಶುವಿನ ಚಿಕಿತ್ಸೆಗೆ ಧರ್ಮಸ್ಥಳದಿಂದ ಧನಸಹಾಯ ನೀಡಲಾಯಿತು.
ಶಿಶುವಿನ ತಲೆಯಲ್ಲಿ ನೀರು ತುಂಬಿದ್ದು ನೀರನ್ನು ಹೊರ ತೆಗೆಯಲು 2 ವಾರಕ್ಕೊಮ್ಮೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ. ಅಲ್ಲಿ ದುಬಾರಿ ವೆಚ್ಚ ವ್ಯಯಿಸಬೇಕಾಗಿದೆ. ಕಡು ಬಡವರಾದ ಅವರು, ಶಿಶುವಿನ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಸಹಾಯಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪರಿಗಣಿಸಿದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು, ಮಗುವಿನ ಚಿಕಿತ್ಸೆಗೆ ಧನಸಹಾಯ ಮಂಜೂರು ಮಾಡಿದ್ದಾರೆ.
ಅದರ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿಗಳು ಭಾನುವಾರ ಫಲಾನುಭವಿ ಸುಮಿತ್ರಾ ಅವರ ಮನೆಗೆ ತೆರಳಿ ವಿತರಿಸಿದರು.
ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ ಮಾತನಾಡಿ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ನೆರವು ನೀಡುತ್ತ ಬಂದಿದ್ದಾರೆ. ಅಂಗವಿಕಲರಿಗೆ ಬೈಸಿಕಲ್ ಸೇರಿದಂತೆ ವಿವಿಧ ಸಲಕರಣೆಗಳನ್ನು ತಾಲೂಕಿನಾದ್ಯಂತ ನೀಡಿದ್ದಾರೆ. ನೈಜ ಫಲಾನುಭವಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಗೆ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ರವಾನಿಸಲಾಗುತ್ತದೆ. ಅವರು ಧನಸಹಾಯ ಸೇರಿದಂತೆ ವಿವಿಧ ಸವಲತ್ತುಗಳನ್ನು ಮಂಜೂರು ಮಾಡುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಷ್ಟದಲ್ಲಿರುವವರಿಗೆ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದಿಂದ ಉಚಿತವಾಗಿ ಸೇವೆ ನೀಡಲಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಸಂದರ್ಭದಲ್ಲಿ ಸಾರ್ವಜನಿಕರು ಸಂಕಷ್ಟವನ್ನು ಎದುರಿಸುತ್ತಿರುವಾಗ ಆ ಸ್ಥಳಕ್ಕೆ ಧಾವಿಸುವ ನಮ್ಮ ತಂಡ ಪರಿಹಾರ ಕಾರ್ಯದಲ್ಲಿ ತೊಡಗುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಶಿವಾನಂದ, ರವಿ ಪೂಜಾರಿ, ಬಬಿತಾ, ಮೇಲ್ವಿಚಾರಕ ದಾಮೋದರ್, ಸೇವಾ ಪ್ರತಿನಿಧಿ ಕಲಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net