

ಬಾಳೆಹೊನ್ನೂರು: ಮನುಷ್ಯ ಹೇಗೆ ಬಾಳಬೇಕೆನ್ನುವ ನೀತಿ ನಿಯಮಗಳ ಸಂಹಿತೆಯೇ ಧರ್ಮ. ಜೀವನದಲ್ಲಿ ವಿನಯ ಮತ್ತು ಕ್ರಿಯಾಶೀಲ ಗುಣಗಳನ್ನು ಅಳವಡಿಸಿಕೊಂಡು ಬಾಳಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರಾವಣ ಕೊನೆಯ ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಕಷ್ಟ ಮತ್ತು ಸಮಸ್ಯೆಗಳು ದೂರವಾಗಿ ಮಾನವೀಯ ಸಂಬಂಧಗಳು ಬೆಳೆಯಲು ಮಹಾತ್ಮರ ಚಿಂತನೆಗಳು ಆಶಾಕಿರಣ. ಇವುಗಳಿಂದ ಮನುಷ್ಯ ವಿಧೇಯ ಸದ್ಗುಣಗಳನ್ನು ಕಲಿಯಬಹುದು. ಮನುಷ್ಯನಲ್ಲಿರುವ ಮೃಗತ್ವ ಹೋಗಲಾಡಿಸುವುದು, ಸತ್ಯ, ಸನ್ಮಾರ್ಗದ ಕಡೆಗೆ ಕರೆದೊಯ್ಯುವುದೇ ಮಹಾತ್ಮರ ಜೀವನದ ಗುರಿ ಎಂದು ಹೇಳಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ದುಷ್ಟ ದುರಹಂಕಾರದ ದರ್ಪವನ್ನು ನಾಶ ಮಾಡಿ ಶಿವಜ್ಞಾನದ ಅರಿವು ಮೂಡಿಸಿದ ಪರಮಾಚಾರ್ಯ. ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯಲು ನಿರಂತರ ಶ್ರಮಿಸಿದ ದಿವ್ಯ ಚೇತನ. ಅವರು ತೋರಿದ ದಾರಿ ಕೊಟ್ಟ ಸಂದೇಶ ಸರ್ವರ ಬಾಳಿಗೆ ಬೆಳಕು ಮತ್ತು ಬಲ ತಂದುಕೊಡುತ್ತದೆ ಎಂದರು.
ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಪ್ರೀತಿ, ವಾತ್ಸಲ್ಯ, ಸಹನೆ ಕರುಣೆ ಮತ್ತು ಪರೋಪಕಾರ ಸದ್ಗುಣಗಳನ್ನು ಬೆಳೆಸಲು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರಂತರ ಶ್ರಮಿಸಿದವರು ಆಚಾರ್ಯರು ಎಂದು ಬಣ್ಣಿಸಿದರು.
ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ವಿಶ್ವಬಂಧುತ್ವ ಸಾರಿದೆ. ಕಾಯಕ ಮತ್ತು ದಾಸೋಹಕ್ಕೆ ಆದ್ಯತೆ ಕೊಟ್ಟ ವೀರಶೈವ ಧರ್ಮ ಸಕಲರಿಗೂ ಒಳಿತು ಬಯಸಿದೆ ಎಂದರು.
ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ‘ವರ್ಷದ ವಾರ್ತಾ ಸಂಕಲನ’ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಪ್ರಾತಃಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ಶ್ರಾವಣ ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ನಡೆಯಿತು. ಶ್ರೀ ರಂಭಾಪುರಿ ಜಗದ್ಗುರುಗಳು ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಕೆ.ಬಿದರೆ ಕಲ್ಮಠದ ಪ್ರಭುಕುಮಾರ ಸ್ವಾಮಿಗಳು, ಸಿಂದಗಿ ಆದಿಶೇಷ ಸಂಸ್ಥಾನ ಹಿರೇಮಠದ ಶ್ರೀಗಳು ಉಪಸ್ಥಿತರಿದ್ದರು.