ಧನ್ವಂತರಿ: ಪ್ರತಿದಿನ ಆಯುರ್ವೇದ, ಪ್ರತಿ ಮನೆಗೂ ಆಯುರ್ವೇದ!

Column-F-2
Published on
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದವು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಭಾರತ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಸಂಕಲ್ಪಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಜಗತ್ತಿಗೆ ಸ್ವಾಸ್ಥ್ಯದ ಪರಿಕಲ್ಪನೆಯನ್ನು ಅತ್ಯಂತ ವೈಜ್ಞಾನಿಕವಾಗಿ, ಸಾರ್ವಕಾಲಿಕ ಸತ್ಯವಾಗಿ, ಪರಿಪೂರ್ಣ ಜ್ಞಾನವಾಗಿ ನೀಡಿದ ದೇಶದ ಹೆಮ್ಮೆಯ ವೈದ್ಯಪದ್ಧತಿಯಾದ ಆಯುರ್ವೆದದ ಪುನರುತ್ಥಾನಕ್ಕೆ ಕೇಂದ್ರ ಸರ್ಕಾರವು ಆಸಕ್ತಿಯಿಂದ ಪ್ರಮಾಣಬದ್ಧವಾಗಿ, ಕಟಿಬದ್ಧವಾಗಿ ದಿಟ್ಟವಾದ ಹಾಗೂ ದೃಢವಾದ ಹೆಜ್ಜೆಗಳನ್ನು ಹಾಕುತ್ತಿರುವುದು ಸಂತಸದ ಸಂಗತಿ.

ಸ್ವಾತಂತ್ರ್ಯದ ಅಮೃತ ಕಾಲದಲ್ಲೇ ವಿಶ್ವಕ್ಕೆ ಅಮೃತವನ್ನು ನೀಡಿದ ಆಯುರ್ವೆದದತ್ತ ಕಣ್ಣೆತ್ತಿ ನೋಡುತ್ತಿರುವುದು ಸ್ವಾಸ್ಥ್ಯವನ್ನು ಜಗತ್ತಿಗೆ ಹಂಚುವ ಸಂಕಲ್ಪದ ಸಾಕಾರಕ್ಕೆ ಮುನ್ನುಡಿ ಬರೆದಿದೆ. 2016ನೆಯ ಇಸವಿಯಿಂದ ಪ್ರತಿವರ್ಷ ಧನ್ವಂತರಿ ಜಯಂತಿಯಂದು ಆಚರಿಸುವ ತೀರ್ವನವನ್ನು ಪ್ರಧಾನ ಮಂತ್ರಿಗಳು ಏಳು ವರ್ಷಗಳ ಹಿಂದೆ ಕೈಗೊಂಡದ್ದು ರಾಷ್ಟ್ರದ ಸೌಭಾಗ್ಯ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸರಿಯಾಗಿ ನೆನಪಾಗದಿದ್ದ ನಮ್ಮ ನೆಲದ ಆಯುರ್ವೆದದ ರಾಷ್ಟ್ರೀಯ ದಿನಾಚರಣೆಯನ್ನು ಪ್ರಾರಂಭಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಲೇಬೇಕು. ಇಷ್ಟಕ್ಕೇ ನಿಲ್ಲದೆ ಜನರ ಸ್ವಾಸ್ಥ್ಯ ಪಾಲನೆಯ ದೃಷ್ಟಿಯಿಂದ ಮಹತ್ವಪೂರ್ಣ ನಿರ್ಧಾರವೊಂದನ್ನು ದೃಢಸಂಕಲ್ಪದೊಂದಿಗೆ ಘೋಷಿಸಿದೆ. ಅಮೃತಮಹೋತ್ಸವದ 2022ನೇ ಇಸವಿಯಿಂದ ಶತಮಾನೋತ್ಸವದ 2047ನೇ ಇಸವಿಯ ತನಕದ 25 ವರ್ಷಗಳನ್ನು ‘ಆಯುರ್ವೆದದ ಅಮೃತಕಾಲ’ ಎಂದು ಘೊಷಣೆ ಮಾಡಿದೆ. ಇದಕ್ಕಾಗಿ ಹಲವಾರು ಯೋಚನೆ, ಯೋಜನೆ, ಕಾರ್ಯಕ್ರಮಗಳ ರೂಪುರೇಷೆ, ದೂರದೃಷ್ಟಿಯ ನಿರ್ಧಾರಗಳ ಹಾದಿಯನ್ನೂ ಪ್ರಕಟಿಸಿದೆ. ಏಳನೆಯ ಆಯುರ್ವೆದ ದಿನಾಚರಣೆಯನ್ನು ಪ್ರಸಕ್ತ ವರ್ಷ ‘ಹರ್ ದಿನ್ ಹರ್ ಘರ್ ಆಯುರ್ವೆದ’ ಎಂಬ ಘೊಷವಾಕ್ಯದೊಂದಿಗೆ ಅ. 23ರಂದು ಆಚರಿಸಲಾಗಿದೆ.

ವಿಶೇಷವೆಂದರೆ ರಾಷ್ಟ್ರೀಯ ಆಯುರ್ವೆದದ ದಿನವನ್ನು ವಿಶ್ವದ ಎಲ್ಲಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲೂ ಆಚರಿಸಿ ಸಂಭ್ರಮಿಸಿದ್ದು ವಿಶ್ವದೆಲ್ಲೆಡೆ ಆಯುರ್ವೆದ ಪಸರಿಸುವ ಗುರಿ ಹಾಗೂ ಸರಕಾರದ ಇರಾದೆಯ ಭವಿಷ್ಯದ ಪಥವನ್ನು ಸ್ಪಷ್ಟಪಡಿಸಿದೆ. ‘ಪ್ರತಿದಿನವೂ ಪ್ರತಿಮನೆಯಲ್ಲೂ ಆಯುರ್ವೆದ’ ಎಂಬುದು ಇಲ್ಲಿನ ವಿಷಯ. ಜೀವಿತಾವಧಿಯಾದ ಆಯುವನ್ನು ದೀರ್ಘಾಯು, ದೀರ್ಘಾಯುವಿನಿಂದ ಸುಖಾಯು, ಸುಖಾಯುವಿನಿಂದ ಹಿತಾಯು ಪ್ರಾಪ್ತಿ ಮಾಡಿಕೊಳ್ಳುವುದೇ ಆಯುರ್ವೆದದ ಮೂಲ ತಿರುಳು. ಇದಕ್ಕಾಗಿ ಜನ ಜಾಗೃತಿ ಆಗಬೇಕು. ಸ್ವಾಸ್ಥ್ಯದ ಗುರಿಸಾಧನೆಗೆ ಜನ ಸಂದೇಶ, ಜನ ಭಾಗೀದಾರಿ, ಜನ ಆಂದೋಲನ ಎಂಬ ಮೂರು ಸ್ತರಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರಸಿದ್ಧ ರಾಷ್ಟ್ರೀಯ ಪತ್ರಿಕೆಯೊಂದು ಇತ್ತೀಚೆಗೆ ನಡೆಸಿದ ಟ್ವಿಟರ್ ಸಮೀಕ್ಷೆಯಲ್ಲಿ ಜನತೆಗೆ ಒಂದೇ ಪ್ರಶ್ನೆಯನ್ನು ಕೇಳಿತ್ತು. ‘ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಬಂದರೆ ಯಾವ ಚಿಕಿತ್ಸಾ ಪದ್ಧತಿ ಪ್ರಥಮ ಆಯ್ಕೆ?’ ಅಚ್ಚರಿಯ ವಿಚಾರವೆಂದರೆ 62.6 ಪ್ರತಿಶತ ಜನರು ಆಯುರ್ವೆದವೇ ನಮ್ಮ ಪ್ರಥಮ ಆಯ್ಕೆ ಎಂದರೆ, 28.5 ಶೇಕಡಾ ಜನರು ಅಲೋಪಥಿ, 5.9 ಪ್ರತಿಶತ ನಾಗರಿಕರು ಹೋಮಿಯೋಪಥಿ, ಇನ್ನುಳಿದ 3 ಶೇಕಡಾ ಜನತೆ ಅನ್ಯ ಚಿಕಿತ್ಸಾ ಪದ್ಧತಿಗಳ ಮೊರೆಹೋಗುತ್ತೇವೆ ಎಂದುತ್ತರಿಸಿದರು! ಕೋವಿಡ್ ಕಾಲದಲ್ಲಿ ಆರೋಗ್ಯ ಕ್ಷೇತ್ರದಲ್ಲಾದ ಕ್ರಾಂತಿಕಾರೀ ಪರಿವರ್ತನೆಗಳ ಪರಿಣಾಮ ಇದೆಂಬುದು ಸ್ಪಷ್ಟ.

ಜನರ ಆರೋಗ್ಯ ಪರಿಪಾಲನೆಗೆ ಹಲವಾರು ವೈದ್ಯಪದ್ಧತಿಗಳಿವೆ. ಎಲ್ಲವೂ ಆರೋಗ್ಯವೇ ಗುರಿಯಾಗಿರುವ ಪದ್ಧತಿಗಳು. ಪೂರ್ಣ ಪ್ರಮಾಣದ ಆರೋಗ್ಯ ಸಾಧನೆ ಆಗಬೇಕಾದರೆ ಔಷಧ ಹಾಗೂ ಚಿಕಿತ್ಸೆ ಗಳು ಎಲ್ಲೆಡೆ ತಲುಪಬೇಕು. ಹಾಗಾದಾಗ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ಸಿಕ್ಕಿ ಆರೋಗ್ಯ ಲಭಿಸಬಹುದು ಎಂಬುದು ಲೆಕ್ಕಾಚಾರ. ಎಲ್ಲೆಡೆ ಔಷಧ, ಎಲ್ಲೆಡೆ ಚಿಕಿತ್ಸೆ ಎಂಬುದು ಈ ಎಲ್ಲಾ ಪದ್ಧತಿಗಳ ಗುರಿಯ ಸಾರ. ಪ್ರತಿಯೊಂದು ದಿನವೂ ಚಿಕಿತ್ಸಾ ಪದ್ಧತಿ ಬೇಕೆಂದರೆ ಅನುದಿನವೂ ಜನ ರೋಗಿಗಳಾಗಿರಬೇಕು. ಪ್ರತಿ ಮನೆಗೂ ಚಿಕಿತ್ಸಾ ಪದ್ಧತಿಯನ್ನು ಕೊಂಡೊಯ್ಯುವುದೆಂದರೆ ಎಲ್ಲಾ ಮನೆಗಳಲ್ಲೂ ರೋಗ ಇರುವಂತೆ ಮಾಡುವುದೆಂದೇ ಅರ್ಥೈಸಬೇಕಾಗುತ್ತದೆ. ಏಕೆಂದರೆ ರೋಗಿ, ರೋಗ ಇಲ್ಲದಿರುವಲ್ಲಿ ವೈದ್ಯ ಪದ್ಧತಿಗಳಿಗೆ ಕೆಲಸ ಇರುವುದಿಲ್ಲ. ಇವೆಲ್ಲವುಗಳ ನಡುವೆ ಆಯುರ್ವೆದವು ತನ್ನ ವಿಶಿಷ್ಟ ಸ್ಥಾನಮಾನದೊಂದಿಗೆ ಎದ್ದುಕಾಣು ವುದೇ ಇಲ್ಲಿ. ಅನಾರೋಗ್ಯ ಪೀಡಿತರಿಗೆ ಆಯುರ್ವೆದ ಯಾವ ರೀತಿಯಲ್ಲಿ ಪ್ರಯೋಜನಕಾರಿಯೋ ಅದಕ್ಕಿಂತಲೂ ಮಿಗಿಲಾಗಿ ಸ್ವಸ್ಥ ಮಾನವರಿಗೂ ಉಪಕಾರಿ. ಹಾಗಾಗಿ ಕೇವಲ ಒಂದೇ ವೈದ್ಯ ಪದ್ಧತಿಯನ್ನು ‘ಪ್ರತಿ ದಿನವೂ ಪ್ರತಿ ಮನೆಗೂ’ ಎಂಬ ಈ ಘೊಷವಾಕ್ಯ ದೊಂದಿಗೆ ಆಚರಿಸಲು ಸಾಧ್ಯ, ಅದು ಭಾರತದ ಆಯುರ್ವೆದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net