

ಚಿಕಿತ್ಸೆಯಲ್ಲಿ ವೈದ್ಯ ಹೇಗೆ ಪ್ರಧಾನ ಎಂಬುದನ್ನು ಆಯುರ್ವೆದದ ‘ಭೈಷಜ್ಯ ರತ್ನಾವಲೀ’ ಗ್ರಂಥದಲ್ಲಿ ಎರಡು ಉದಾಹರಣೆಗಳೊಂದಿಗೆ ಹೇಳಲಾಗಿದೆ. ರುಚಿಯಾದ ಆಹಾರ ಪಾಕದಲ್ಲಿ ಪಾತ್ರೆ, ಇಂಧನ ಹಾಗೂ ಅಗ್ನಿಗಳ ಪಾತ್ರ ಇದ್ದರೂ ಅಡುಗೆ ಮಾಡುವವರೇ ಪ್ರಧಾನರಾಗುತ್ತಾರೆ. ಶುಚಿ, ರುಚಿ, ಪಾಕ ವೈವಿಧ್ಯಗಳೆಲ್ಲವೂ ಅವರನ್ನೇ ಅವಲಂಬಿಸಿವೆ. ಯುದ್ಧದ ವಿಜಯದಲ್ಲಿ ರಣಾಂಗಣ, ಸೈನ್ಯ, ಆಯುಧಗಳಿಗೆ ಮಹತ್ವಪೂರ್ಣ ಪಾತ್ರವಿದ್ದರೂ ಸೇನಾನಿಯದ್ದೇ ಪ್ರಮುಖ ಭೂಮಿಕೆ ಇರುತ್ತದೆ. ಅಂತೆಯೇ ಚಿಕಿತ್ಸೆಯಲ್ಲಿ ವೈದ್ಯ, ಔಷಧ, ಪರಿಚಾರಕ ಹಾಗೂ ರೋಗಿಗಳೆಂಬ ನಾಲ್ಕು ಅಂಗಗಳಿದ್ದರೂ ಚಿಕಿತ್ಸೆಯ ಸಿದ್ಧಿಗೆ ವೈದ್ಯನೇ ಪ್ರಮುಖ. ಚರಕ ಸಂಹಿತೆಯಲ್ಲೂ ಈ ಸಂಬಂಧದ ವಿವರಣೆ ಇದೆ. ಮಣ್ಣು, ದಂಡ, ಚಕ್ರ ಹಾಗೂ ಸೂತ್ರಗಳು ಮಡಕೆ ಮಾಡಲು ಬೇಕಾಗಿದ್ದರೂ ಕುಂಬಾರನ ಪಾತ್ರವೇ ಅತ್ಯಂತ ಮುಖ್ಯವಾಗಿರುತ್ತದೆ. ರೋಗಿಯೊಬ್ಬನ ಪ್ರಾಣ ಉಳಿಸಲು ಕಷ್ಟಕರವಾದ ಪರಿಸ್ಥಿತಿ ಇದ್ದಾಗಲೂ ವ್ಯಾಧಿಯನ್ನು ಗುಣಪಡಿಸುವ ಶಕ್ತಿ ವೈದ್ಯನಿಗೆ ಇರುತ್ತದೆ. ಚಿಕ್ಕ ಕಾಯಿಲೆ ಇದ್ದಾಗ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅದು ದೊಡ್ಡದಾಗಿ ರೋಗಿಯನ್ನು ಹೈರಾಣಾಗಿಸುವುದಿದೆ. ಇವೆರಡರಲ್ಲೂ ವೈದ್ಯರ ಪಾತ್ರ ಬಹಳ ಸ್ಪಷ್ಟವಾಗುತ್ತದೆ. ವೈದ್ಯರ ಪ್ರಧಾನ ಕಾರ್ಯಭಾರ ಎದ್ದು ಕಾಣುತ್ತದೆ.
ವ್ಯಾಧಿಯನ್ನು ಸರಿಯಾಗಿ ತಿಳಿದುಕೊಂಡು ಚಿಕಿತ್ಸೆ ನೀಡಲು ಮುಂದಾದರೆ ಅದು ಯಶಸ್ವಿಯಾಗುತ್ತದೆ. ಔಷಧ ಹಾಗೂ ಅದರ ವಿಶೇಷ ಜ್ಞಾನಗಳೆರಡೂ ವೈದ್ಯನಿಗೆ ಇರಲೇಬೇಕು, ವ್ಯಾಧಿ ನಿರ್ಣಯವೂ ಸೂಕ್ತವಾಗಿದ್ದರೆ ಮಾತ್ರ ಔಷಧ ವಿಧಾನದ ಜ್ಞಾನಕ್ಕೆ ಬೆಲೆ ಇರುತ್ತದೆ. ಆದುದರಿಂದ ವೈದ್ಯನ ತಜ್ಞ ಅಭಿಪ್ರಾಯ, ನೈಪುಣ್ಯಕ್ಕೆ ಎಲ್ಲಿಲ್ಲದ ಮಹತ್ವವಿದೆ. ಅದಕ್ಷ ವೈದ್ಯನು ಚಿಕಿತ್ಸೆ ನೀಡಲು ಯೋಗ್ಯನಲ್ಲ. ಏನೇನೂ ಅರಿತಿರದ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕಿಂತ ಸ್ವಯಂ ಆತ್ಮಾಹುತಿ ಮಾಡಿಕೊಳ್ಳುವುದೇ ಮೇಲು ಎಂಬ ಚರಕ ಸಂಹಿತೆಯ ಮಾತು ವೈದ್ಯರಿಗೆ ಇರಬೇಕಾದ ಜ್ಞಾನದ ಜವಾಬ್ದಾರಿಯನ್ನು ಸ್ಪಷ್ಟಪಡಿಸುತ್ತದೆ. ಅಂಧವ್ಯಕ್ತಿಯು ಕೈಗಳ ಸಹಾಯ ಪಡೆದು ಮುನ್ನಡೆಯುತ್ತಾನೆ. ಆದರೆ ಹೆಜ್ಜೆ ಹೆಜ್ಜೆಗೂ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಚಿಕಿತ್ಸೆ ಎಂಬುದು ಹೀಗಾಗಬಾರದು. ಬಿರುಗಾಳಿಗೆ ಸಿಲುಕಿದ ನೌಕೆಯಂತೆ ದಿಕ್ಕುಗೆಡಬಾರದು. ನಿಶ್ಚಿತವಾಗಿಯೂ ಆಯುಷ್ಯ ಗಟ್ಟಿಯಿರುವವರು ವೈದ್ಯರು ಸರಿಯಿಲ್ಲದಿದ್ದಾಗಲೂ ಕಾಯಿಲೆಯಿಂದ ಹೊರಬರುತ್ತಾರೆ. ಆದರೆ ಅನಿಯತ ಆಯುಷ್ಯ ಉಳ್ಳ ನೂರಾರು ಜನರು ಜೀವ ಕಳೆದುಕೊಳ್ಳುತ್ತಾರೆ. ಇದನ್ನು ವೈದ್ಯರು ತಿಳಿದುಕೊಳ್ಳದೆ ಗುಣವಾಗದ ಕಾಯಿಲೆಯ ಚಿಕಿತ್ಸೆಗೆ ಮುಂದಾದರೆ ಅವರ ಧನ, ವಿದ್ಯೆ, ಯಶಸ್ಸು ಈ ಮೂರೂ ಹಾನಿಯಾಗಿ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಚರಕಸಂಹಿತೆ ಎಚ್ಚರಿಸಿದೆ.
ಯಶಸ್ವೀ ವೈದ್ಯರಾಗಲು ಅಪೇಕ್ಷಿಸುವ ಬುದ್ಧಿವಂತ ವ್ಯಕ್ತಿಯು ತನ್ನೆಲ್ಲಾ ಪ್ರಯತ್ನಗಳನ್ನು ಹಾಕಿ ಸರ್ವಗುಣ ಸಂಪನ್ನನಾಗಬೇಕು. ಆಗಮಾತ್ರ ನರರಿಗೆ ಪ್ರಾಣ ನೀಡಲು ಬಲ ಬರುತ್ತದೆ. ವೈದ್ಯರ ಪರಿಣತಿ ಮೂರು ವಿಚಾರಗಳಲ್ಲಿ ಅತಿಮುಖ್ಯ ಎಂಬುದನ್ನು ‘ಭೈಷಜ್ಯ ರತ್ನಾವಲೀ’ ಗ್ರಂಥ ಸೂಚಿಸುತ್ತದೆ. ವೈದ್ಯರು ರೋಗ ವಿಶೇಷಜ್ಞ, ಸರ್ವ ಭೈಷಜ್ಯ ಕೋವಿದ, ಸಾಧ್ಯ ಅಸಾಧ್ಯ ವಿಧಾನಜ್ಞ ಈ ಮೂರೂ ಆಗಿರಲೇಬೇಕು. ರೋಗದ ಸಮಗ್ರ ಜ್ಞಾನವಿರಬೇಕು, ಎಲ್ಲಾ ಔಷಧಗಳನ್ನು ಸಂಪೂರ್ಣವಾಗಿ ತಿಳಿದಿರಬೇಕು, ವ್ಯಾಧಿ ನಿರ್ಣಯ ಹಾಗೂ ಚಿಕಿತ್ಸಾ ಮಾರ್ಗಗಳ ಸ್ಪಷ್ಟ ಅರಿವು ಇರಬೇಕು. ಆಗ ಪರಿಪೂರ್ಣ ಯಶಸ್ಸು ಕಟ್ಟಿಟ್ಟ ಬುತ್ತಿ, ಇದುವೇ ಚಿಕಿತ್ಸಾ ಸಿದ್ಧಿ.