

ಚೆನ್ನೈ: ಭಾರತದಲ್ಲಿ ಮದುವೆ ಮತ್ತು ವೈವಾಹಿಕ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಡೀ ವಿಶ್ವವೇ ನಮ್ಮ ಸಂಪ್ರದಾಯವನ್ನು ಗೌರವಿಸುತ್ತದೆ. ಇಂತಹ ಭಾರತೀಯ ವೈವಾಹಿಕ ವ್ಯವಸ್ಥೆ ಈಗ ಅಸ್ತವ್ಯಸ್ತವಾಗಿದೆ. ನಮ್ಮ ದೇಶದಲ್ಲಿ ಪ್ರಸ್ತುತ ವಿಚ್ಛೇದನ ಸಂಸ್ಕೃತಿ ಬೆಳೆಯುತ್ತಿದೆ. ಅದರಲ್ಲೂ ಸಮಾಜದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಎಲ್ಲರಿಗೂ ಮಾದರಿಯಾಗಬೇಕಾದ ಸೆಲೆಬ್ರಿಟಿಗಳು ಒಬ್ಬರ ಹಿಂದೆ ಒಬ್ಬರಂತೆ ವಿಚ್ಛೇದನ ಪಡೆಯುತ್ತಿರುವುದು ವಿಪರ್ಯಾಸವೇ ಸರಿ.
ತಮಿಳು ನಟ ಧನುಷ್ ಮತ್ತು ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್( Dhanush and Aishwaryaa) ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಐಶ್ವರ್ಯಾ ಮತ್ತು ಧನುಷ್ 2004ರಲ್ಲಿ ವಿವಾಹವಾದರು. ಈ ದಂಪತಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು 18 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದ ದಂಪತಿ 2022ರಲ್ಲಿ ಬೇರ್ಪಡುವುದಾಗಿ ತಿಳಿಸಿದ್ದರು. ಇಬ್ಬರೂ ವಿಚ್ಛೇದನಕ್ಕಾಗಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ನಂತರ ಧನುಷ್ ಮತ್ತು ಐಶ್ವರ್ಯಾ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಎರಡು ವರ್ಷಗಳಿಂದ ಒಟ್ಟಿಗೆ ಇರಲಿಲ್ಲ.
ಬೇರ್ಪಡುವುದಾಗಿ 2022ರಲ್ಲಿ ಘೋಷಿಸಿದ ನಂತರವೂ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದಿರಲಿಲ್ಲ. ಈ ಪ್ರಕರಣದಲ್ಲಿ ಹಿಂದೆ ಮೂರು ಬಾರಿ ವಿಚಾರಣೆ ನಡೆದಿತ್ತು, ಆದರೆ ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ಯಾವುದೇ ಅಧಿವೇಶನಕ್ಕೆ ಹಾಜರಾಗಿರಲಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ಹೊಂದಾಣಿಕೆ ನಡೆದಿದೆ ಎಂಬ ಮಾತು ಬಹಳ ಹಿಂದೆಯೇ ಹರಿದಾಡಿತ್ತು. ಆ ದಿನಗಳಲ್ಲಿ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದರು. ಆದರೆ ಐಶ್ವರ್ಯಾ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ನ್ಯಾಯಾಧೀಶರು ನವೆಂಬರ್ 27ಕ್ಕೆ ಹೊಸ ವಿಚಾರಣೆಯನ್ನು ನಿಗದಿಪಡಿಸಿದ್ದರು. ಇಂದು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ
ಸದ್ಯ ಧನುಷ್ ಟಾಲಿವುಡ್ ಡೈರೆಕ್ಟರ್ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಕುಬೇರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.(ಏಜೆನ್ಸೀಸ್)