

ಚೆನ್ನೈ: ಇತ್ತೀಚೆಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಸೆನ್ಸೇಷನಲ್ ವಿಚಾರ ಎಂದರೆ ಅದು ನಯನತಾರಾ ಮತ್ತು ಧನುಷ್ ನಡುವಿನ ವಿವಾದ(Controversy). ಈ ವಿವಾದ ಸದ್ಯ ಕೋರ್ಟ್ ಅಂಗಳಕ್ಕೆ ತಲುಪಿದೆ. ನಟಿ ನಯನತಾರಾ ಮತ್ತು ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ವಿರುದ್ಧ ಧನುಷ್ ಮೊಕದ್ದಮೆ ಹೂಡಿದ್ದಾರೆ. 'ನಯನತಾರಾ ಬಿಯಾಂಡ್ ದಿ ಫೇರಿ ಟೇಲ್' ಸಾಕ್ಷ್ಯಚಿತ್ರದಲ್ಲಿ(Documentary) ಅನುಮತಿಯಿಲ್ಲದೆ' ನಾನು ರೌಡಿಡಾನ್ ' ದೃಶ್ಯಗಳನ್ನು ಬಳಸಿದ್ದಕ್ಕಾಗಿ ಅವರ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದೆ.
ಪೀಠವು ಈ ಅರ್ಜಿಯನ್ನು ಬುಧವಾರ( ನವೆಂಬರ್ 27) ಪರಿಶೀಲಿಸಿ ತನಿಖೆಗೆ ಒಪ್ಪಿಗೆ ಸೂಚಿಸಿತು. ವರದಿಗಳ ಪ್ರಕಾರ ಮುಂದಿನ ವಿಚಾರಣೆಯಲ್ಲಿ ನಯನತಾರಾ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ. ನಯನತಾರಾ ಮತ್ತು ಅವರ ಪತಿ, ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ವಿರುದ್ಧ ಧನುಷ್ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಯನತಾರಾ ಹಾಗೂ ಧನುಷ್ ನಡುವಿನ ಗಲಾಟೆ ಗೊತ್ತೆ ಇದೆ.
ಲೇಡಿ ಸೂಪರ್ ಸ್ಟಾರ್ ನಯನತಾರಾ ನಟ ಧನುಷ್ ನಿಜ ಸ್ವರೂಪ ಇದೇ ಎಂದು ದೂಷಿಸಿ ಮೂರು ಪುಟಗಳ ಸುದೀರ್ಘ ಪತ್ರವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು ಗೊತ್ತೆ ಇದೆ. ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan) 2022ರಲ್ಲಿ ವಿವಾಹವಾದರು. ವಿವಾಹದ ಬಳಿಕ ತಮ್ಮ ಜೀವನದ ವಿಚಾರಗಳನ್ನು ಸೇರಿಸಿದ ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಈ ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಿದ್ದರು. ಆದರೆ ಈ ಮಧ್ಯೆ ಕಾಲಿವುಡ್ ನಟ ಧನುಷ್ ಅನುಮತಿಯಿಲ್ಲದೆ ತಮ್ಮ ಸಿನಿಮಾದ ಕ್ಲಿಪ್ ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿ 10 ಕೋಟಿ ಪರಿಹಾರ ಕೇಳಿದ್ದಾರೆ ಎಂದು ಆರೋಪಿಸಿ ನಟಿ ನಯನತಾರಾ ತಿಳಿಸಿದ್ದರು.
ಅಸಲಿಗೆ 2015ರಲ್ಲಿ ಧನುಷ್ ನಿರ್ಮಾಣದ ನಾನು ರೌಡಿತಾನ್ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸಿದ್ದಾರೆ. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ನಂತರ ನಯನ ಮತ್ತು ಧನುಷ್ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಇತ್ತೀಚೆಗೆ ನಯನತಾರಾ ಅವರ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಾಕ್ಷ್ಯಚಿತ್ರದಲ್ಲಿ ಧನುಷ್ ನಿರ್ಮಿಸಿರುವ ನಾನು ರೌಡಿತಾನ್ ಚಿತ್ರದ ಹಾಡಿನ 3 ಸೆಕೆಂಡುಗಳ ವಿಡಿಯೋವನ್ನು ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿದ್ದರು. ನಟಿಯ ಪೋಸ್ಟ್ನಲ್ಲಿನ ಕಾಮೆಂಟ್‌ಗಳು ಕಾಲಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಅನೇಕ ನಟಿಯರು ನಯನತಾರಾ ಅವರನ್ನು ಬೆಂಬಲಿಸಿದರು. ಧನುಷ್‌ಗೆ ಅಭಿಮಾನಿಗಳ ಬೆಂಬಲ ಸಿಕ್ಕಿದೆ. (ಏಜೆನ್ಸೀಸ್)