

ನವದೆಹಲಿ: ಇತ್ತೀಚೆಗಷ್ಟೇ ದೆಹಲಿಯ ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟದಿಂದ ಕಾಣಿಸಿಕೊಂಡ ಬೆಂಕಿ ಅವಘಡದಿಂದ ಅಲರ್ಟ್ ಆಗಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಮುಂದಿನ ದಿನಗಳಲ್ಲಿ ಭಾರತೀಯ ಫ್ಲೈಟ್ಗಳಲ್ಲಿ ಪವರ್ ಬ್ಯಾಂಕ್ ಬಳಕೆಯನ್ನು ನಿಷೇಧಿಸುವ ಅಥವಾ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ.
ಭಾನುವಾರ (ಅ.19) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಮಾಪುರಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ನಿರ್ಗಮನಕ್ಕೆ ಕೆಲವೇ ನಿಮಿಷ ಬಾಕಿಯಿತ್ತು. ಈ ವೇಳೆ, ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಪೋಟಗೊಂಡಿತು. ಘಟನೆಯಲ್ಲಿ ಯಾರಿಗೂ ಗಾಯಗಳು ಉಂಟಾಗಿಲ್ಲ. ಪವರ್ ಬ್ಯಾಂಕ್ ಸ್ಫೋಟಗೊಂಡ ತಕ್ಷಣವೇ ಕ್ಯಾಬಿನ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಡಿಜಿಸಿಎ, ಭಾರತೀಯ ವಿಮಾನಗಳಲ್ಲಿ ಪವರ್ ಬ್ಯಾಂಕ್ ಬಳಕೆಯನ್ನು ನಿಷೇಧಿಸಲು ಮುಂದಾಗಿದೆ.
ಈ ಪರಿಶೀಲನೆಯು ವಿಮಾನದೊಳಗೆ ಪವರ್ ಬ್ಯಾಂಕ್ ಬಳಕೆಯನ್ನು ನಿಷೇಧಿಸಲು, ವಿದ್ಯುತ್ ಸಾಮರ್ಥ್ಯದ ಮೇಲೆ ಕಡ್ಡಾಯ ನಿರ್ಬಂಧಗಳನ್ನು ಹೇರಲು ಅಥವಾ ಅಪಾಯಗಳನ್ನು ತಗ್ಗಿಸಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ವಿಮಾನಗಳಲ್ಲಿ ಪವರ್ ಬ್ಯಾಂಕ್ ಹೊತ್ತೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಎಲ್ಲ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ನಾಗರಿಕ ವಿಮಾನಯಾನ ಸಚಿವಾಲಯಕ್ಕೂ (MoCA) ಮಾಹಿತಿ ನೀಡಲಾಗಿದ್ದು, ಎರಡೂ ಸಂಸ್ಥೆಗಳು ಈಗ ಹೊಸ ಸುರಕ್ಷತಾ ಕ್ರಮಗಳನ್ನು ನಿರ್ಧರಿಸಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ,(ಏಜೆನ್ಸೀಸ್).