ODI Cricket | ಮತ್ತೆ ಸೊನ್ನೆ ಸುತ್ತಿದ ಕಿಂಗ್​ ಕೊಹ್ಲಿ...ನಿವೃತ್ತಿಯ ಸುಳಿವು ನೀಡಿದರಾ ಕರುನಾಡಿನ ದತ್ತು ಮಗ..?

Untitled design (3)
Published on

ಅಡಿಲೇಡ್​​: ಏಕದಿನ ಕ್ರಿಕೆಟ್​ನಲ್ಲಿ (ODI Cricket) ಮೊದಲ ನಿದರ್ಶನ ಎಂಬಂತೆ ಸತತ ಎರಡನೇ ಬಾರಿ ಶೂನ್ಯಕ್ಕೆ ಔಟಾಗಿರುವ ಹಿರಿಯ ಕ್ರಿಕೆಟಿಗ ವಿರಾಟ್​​ ಕೊಹ್ಲಿ ಬೇಡವಾದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪರ್ತ್​​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ಎಸೆತಗಳಲ್ಲಿ ಖಾತೆ ತೆರೆಯಲು ವಿಫಲವಾಗಿದ್ದ ಕೊಹ್ಲಿ, ಅಡಿಲೇಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದಾರೆ.

ಕೊಹ್ಲಿ ಬ್ಯಾಟಿಂಗ್​ ವೈಫಲ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ದಿನಗಳು ಮುಗಿದವೇ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಔಟಾದ ಬಳಿಕ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ಕೊಹ್ಲಿ ನಡೆ ಸದ್ಯ ಅವರ ನಿವೃತ್ತಿ ಮಾತುಗಳಿಗೆ ಮತ್ತಷ್ಟು ಬಲ ತುಂಬಿದೆ.

ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವಾಗ ಕೈಯಲ್ಲಿ ತಮ್ಮ ಕೈಗವಸುಗಳನ್ನು ಹಿಡಿದು ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದ್ದು, ಈ ಸನ್ನೆಯ ಮೂಲಕ ನಿರ್ಗಮನದ ಸೂಚನೆ ನೀಡುತ್ತಿದ್ದಾರೆಯೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್​​ರಂತಹ ಉದಯೋನ್ಮುಖ ಆಟಗಾರ ಬೆಂಚ್ ಕಾಯುತ್ತಿರುವುದರಿಂದ, ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ಏರ್ಪ್ಟಟ್ಟಿದೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ, ಕೊಹ್ಲಿ ತಮ್ಮ ಫಿಟ್ನೆಸ್ ಮತ್ತು ಸರಣಿಗೆ ಸಿದ್ಧತೆಯ ಕುರಿತಾದ ಹೇಳಿಕೆ ನೀಡುತ್ತಾ, 2027 ರ ಏಕದಿನ ವಿಶ್ವಕಪ್ ಕನಸನ್ನು ಬಿಟ್ಟುಕೊಡಲು ನಿರಾಕರಿಸಿದರು. ಸದ್ಯ ಅವರು ಮೈದಾನದಲ್ಲಿ ನೀಡುತ್ತಿರುವ ಪ್ರದರ್ಶನ ಮತ್ತು ಸರಣಿಯ ಆರಂಭಕ್ಕೂ ಮುನ್ನ ಅವರು ಮಾತನಾಡಿದ ಪದಗಳಿಗೂ ಒಂದಕ್ಕೊಂದು ಹೊಲಿಕೆಯಾಗುತ್ತಿಲ್ಲ.

ಕೊಹ್ಲಿ ಹೇಳಿದ್ದೇನು..?

ನಾನು ಈಗ ಮೊದಲಿಗಿಂತ ಈಗ ಫಿಟ್ ಆಗಿದ್ದೇನೆ, ಆಟವನ್ನು ಆಡಬಹುದು ಮತ್ತು ಮಾನಸಿಕವಾಗಿ ಏನು ಮಾಡಬೇಕೆಂದು ತಿಳಿದಾಗ ತಾಜಾತನವನ್ನು ಅನುಭವಿಸಬಹುದು. ದೈಹಿಕವಾಗಿ ಸಿದ್ಧತೆ ನಡೆಸುವ ಬಗ್ಗೆ ಮಾತ್ರ ಗಮನ ಹರಿಸಬೇಕು ಎಂದು ಭಾನುವಾರ ನಡೆದ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಅವರು ಹೇಳಿದ್ದರು. ಕೊಹ್ಲಿಗೆ ಏಕದಿನ ವಿಶ್ವಕಪ್​​ನಲ್ಲಿ ಆಡಬೇಕು ಎಂಬ ಗುರಿ ಇದ್ದರು, ಪ್ರಸ್ತುತ ಅವರ ಫಾರ್ಮ್ ನೋಡಿದರೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net