ಪವಿತ್ರ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಗ: ಡಾ.ಡಿ.ವೀರೇಂದ್ರ ಹೆಗ್ಗಡೆ

Veerendra Hegde
Published on

ಬೆಳ್ತಂಗಡಿ: ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನೆ ಸಲ್ಲಿಸುವ ಅವಕಾಶ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗುರುವಾರ ಲಭಿಸಿತು.

ಪ್ರಧಾನಮಂತ್ರಿಗಳು ಮಾತನಾಡುವ ಮೊದಲು 10 ನಿಮಿಷದ ಅವಕಾಶವನ್ನು ಡಾ. ಹೆಗ್ಗಡೆಯವರಿಗೆ ನೀಡಿದರು. ಡಾ.ಹೆಗ್ಗಡೆಯವರು ಮಾತನಾಡಿ, ದೇಶದ ಭವಿಷ್ಯ ಗತವೈಭವದಲ್ಲಿಲ್ಲ, ಪ್ರಸ್ತುತ ವಿದ್ಯಮಾನಗಳು ಮುಂದಿನ ಉಜ್ವಲ ಪ್ರಗತಿಗೆ ಬುನಾದಿಯಾಗಿವೆ. ಯುವಜನತೆ ಇದರ ಪ್ರಯೋಜನ ಪಡೆಯಬೇಕೆಂದು ಹಾರೈಸುತ್ತೇನೆ ಎಂದರು.

ಕಾಶಿ ಶ್ರೀ ವಿಶ್ವನಾಥ ದೇವಾಲಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡು ಆಶ್ಚರ್ಯಚಕಿತನಾಗಿದ್ದೇನೆ. ಈ ಮೊದಲು ಅಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದೆ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಮತ್ತು ಅಲ್ಲಿನ ಅಭಿವೃದ್ಧಿ ಕಂಡು ತುಂಬ ಸಂತಸಪಟ್ಟಿದ್ದೇನೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಿಂದ ಶುಭಾಶಯವನ್ನೂ ಅವರಿಗೆ ಕೋರುತ್ತೇನೆ. ಮುಂದಿನ ದಿನಗಳಲ್ಲಿ ರಾಷ್ಟ್ರದ ಪವಿತ್ರ ಕ್ಷೇತ್ರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ನಮ್ಮ ಆಧ್ಯಾತ್ಮಿಕತೆ ಮತ್ತು ಪ್ರಸಿದ್ಧ ತೀರ್ಥಕ್ಷೇತ್ರಗಳ ಬಗ್ಗೆ ಯುವಜನಾಂಗಕ್ಕೆ ಅರಿವು, ಜಾಗೃತಿ ಮೂಡಿಸಬೇಕು. ಅವರಿಗೆ ಸೂಕ್ತ ಅವಕಾಶಗಳ ನಿರ್ಮಾಣ ಮಾಡಬೇಕು. ಕಾಶಿ, ಅಯೋಧ್ಯೆ, ಕೇದಾರನಾಥ ಮೊದಲಾದ ಪವಿತ್ರ ಕ್ಷೇತ್ರಗಳು ಅದ್ಭುತ ಸುಧಾರಣೆ ಕಂಡಿದೆ ಎಂದರು. ರಾಷ್ಟ್ರಪತಿಗಳು ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಬಗ್ಗೆ ಡಾ.ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಪರಂಪರೆ ಬಗ್ಗೆ ವಿದೇಶದಲ್ಲಿ ಗೌರವ

ನಮ್ಮ ಭವ್ಯ ಪರಂಪರೆಯ ಬಗ್ಗೆ ವಿದೇಶಿಯರಿಗೂ ಅಪಾರ ಅಭಿಮಾನ ಮತ್ತು ಗೌರವವಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಬಣ್ಣಿಸಿದರು. ಇಲ್ಲಿಂದ ವಿದೇಶಗಳಿಗೆ ಹೋದ ಆಧ್ಯಾತ್ಮಿಕ ಗುರುಗಳು, ನೇತಾರರು ಆರೋಗ್ಯ ರಕ್ಷಣೆಯಲ್ಲಿ ಆಯುರ್ವೆದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ಪ್ರಚಾರ ಮಾಡಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳ ಪಾತ್ರವೂ ಮಹತ್ವ ಪೂರ್ಣವಾಗಿದೆ. ಪ್ರಧಾನಿಯವರ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮ ವಿಶೇಷವಾಗಿ ಮಹತ್ವಪೂರ್ಣವಾಗಿದೆ. ಭಾಷೆಗಳು ನಮ್ಮನ್ನು ವಿಭಜಿಸುವುದಿಲ್ಲ, ಬದಲಾಗಿ ಒಗ್ಗೂಡಿಸುತ್ತವೆ ಎಂದರು.

ಬಿಜೆಪಿಯಿಂದ ವಿಪ್ ಜಾರಿ

ಅಧಿವೇಶನದ ಮೊದಲ ಚರಣ ಫೆ. 13ಕ್ಕೆ ಮುಗಿಯಲಿದ್ದು, ಇನ್ನೆರಡು ದಿನ ತಪ್ಪದೆ ಲೋಕಸಭೆ ಕಲಾಪದಲ್ಲಿ ಹಾಜರು ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ವಿಪ್ ನೀಡಲಾಗಿದೆ. ಅಧಿವೇಶನ ಶುಕ್ರವಾರವೇ ಕೊನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net