

ರಾಜ್ಯದಲ್ಲಿನ ಎಲ್ಲ ಶಾಲೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ (ಪಬ್ಲಿಕ್ ಡೊಮೈನ್) ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಅನೇಕ ಶಾಲೆಗಳು ಅಕ್ರಮವಾಗಿ ಕೇಂದ್ರ ಪಠ್ಯಕ್ರಮ (ಸಿಬಿಎಸ್ಇ) ಬೋಧನೆ ಮಾಡುತ್ತಿರುವುದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಆಲೋಚನೆಗೆ ಮುಂದಾಗಿದೆ. ಪಬ್ಲಿಕ್ ಡೊಮೈನ್ ಎಂದರೆ ಸಂಬಂಧಪಟ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು. ಇನ್ನು ಶಿಕ್ಷಣ ಕ್ಷೇತ್ರವಂತೂ ಸಾರ್ವಜನಿಕ ಕ್ಷೇತ್ರವೇ ಆಗಿದ್ದು ಇದರಲ್ಲೇನೂ ವಿಷಯಗಳನ್ನು ರಹಸ್ಯವಾಗಿ ಇಡುವಂತಹ ಅಗತ್ಯ ಏನೂ ಇರುವುದಿಲ್ಲ. ಹೀಗಾಗಿ,ರಾಜ್ಯದಲ್ಲಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದರಿಂದ ನಷ್ಟವಂತೂ ಇಲ್ಲ. ಬದಲಾಗಿ, ಸುಳ್ಳು ಹೇಳಿ ಮೋಸ ಮಾಡುವ ಕೆಲ ಶಾಲೆಗಳ ಕಳ್ಳಾಟವನ್ನು ಬಹಿರಂಗಪಡಿಸಲು ಅನುಕೂಲವಾಗುತ್ತದೆ.
ರಾಜ್ಯಾದ್ಯಂತ 700ಕ್ಕೂ ಹೆಚ್ಚಿನ ಶಾಲೆಗಳು ಅನೇಕ ವರ್ಷಗಳಿಂದ ಅಕ್ರಮವಾಗಿ ಕೇಂದ್ರ ಪಠ್ಯಕ್ರಮ ಬೋಧನೆ ಮಾಡುತ್ತಿವೆ ಎಂಬ ಸಂಗತಿ ಕಳವಳಕಾರಿಯಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಅನೇಕ ಶಾಲೆಗಳಿಗೆ ನೋಟಿಸ್ ನೀಡಿ, ನೈಜತೆ ಪರಿಶೀಲನೆಗೆ ಮುಂದಾಗಿದೆ ಎನ್ನಲಾಗಿದೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಯ ಸಹಕಾರ ಇಲ್ಲದೆಯೇ ಇಂತಹ ಅಕ್ರಮಗಳನ್ನು ಶಾಲೆಗಳು ಎಸಗುವುದು ಸುಲಭದ ಸಂಗತಿಯಲ್ಲ. ಏಕೆಂದರೆ, ಶಿಕ್ಷಣ ಇಲಾಖೆ ಸಿಬ್ಬಂದಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ, ಸೌಲಭ್ಯ ಕುರಿತು ಪರಿಶೀಲನೆ ನಡೆಸುವುದು ನಿರಂತರ ಪ್ರಕ್ರಿಯೆಯೇ ಆಗಿರುತ್ತದೆ. ಹೀಗಿರುವಾಗ, ಅನುಮತಿ ಪಡೆದುದರ ಬದಲಾಗಿ ಬೇರೊಂದು ಪಠ್ಯಕ್ರಮ ಬೋಧನೆ ಮಾಡಲು ಹೇಗೆ ಸಾಧ್ಯ? ಈ ಅಕ್ರಮದಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಶಾಮೀಲಾಗಿರುವ ಇಲ್ಲವೇ ಯಾವುದೋ ಒತ್ತಡಕ್ಕೆ ಒಳಗಾಗಿರುವ ಅಥವಾ ನಿರ್ಲಕ್ಷ್ಯ ತೋರಿರುವ ಸಾಧ್ಯತೆ ಗೋಚರಿಸುತ್ತದೆ.
ಇದಲ್ಲದೆ, ಪ್ರತಿ ವರ್ಷ ಜನವರಿ ತಿಂಗಳೊಳಗೆ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕದ ವಿವರ, ಬೋಧಿಸುತ್ತಿರುವ ಪಠ್ಯಕ್ರಮ, ಮೂಲಸೌಕರ್ಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ನೀಡಿ ತಮ್ಮ ಶಾಲಾ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕೆಂಬ ನಿಯಮವನ್ನು ಅನೇಕ ಶಾಲೆಗಳು ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿಯೂ ಶಿಕ್ಷಣ ಇಲಾಖೆ ಮೌನ ವಹಿಸಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತದೆ. ರಾಜ್ಯದಲ್ಲಿನ ಎಲ್ಲ ಶಾಲೆಗಳ ಮತ್ತು ಬೋಧನಾ ಮಂಡಳಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಅವಕಾಶವಿದೆಯೇ ಎಂಬುದನ್ನು ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ವತಃ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿರುವುದರಿಂದ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಂಡು ಸಾರ್ವಜನಿಕರಿಗಾಗುವ ಅನನುಕೂಲ ತಪ್ಪಬಹುದು ಎಂದು ನಿರೀಕ್ಷಿಸಬಹುದಾಗಿದೆ.
ಸಿಬಿಎಸ್ಇ ಶಾಲೆಗಳಿಗೆ ಹೋಲಿಸಿದರೆ, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳ ಗುಣಮಟ್ಟವು ಕೀಳಾಗಿದೆಯೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಭವಿಸುತ್ತದೆ. ಕರ್ನಾಟಕ ಶಾಲೆ ಮತ್ತು ಪಿಯುಸಿ ಪಠ್ಯಕ್ರಮಗಳು ಬಹುತೇಕವಾಗಿ ಸಿಬಿಎಸ್ಇ ಪಠ್ಯಕ್ರಮಕ್ಕೆ ಸಮನಾಗಿಯೇ ಇದೆ. ಈ ನಿಟ್ಟಿನಲ್ಲಿಯೂ ಜಾಗೃತಿ ಮೂಡಿಸಿದರೆ ಶಾಲೆಗಳಲ್ಲಿನ ಪಠ್ಯಕ್ರಮದ ವಂಚನೆ ತಗ್ಗಿಸಬಹುದಾಗಿದೆ.