

ಬೆಂಗಳೂರಿನಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಭೂಮಿಗಳನ್ನು ಕಬ್ಬನ್ ಪಾರ್ಕ್ ರೀತಿ ಅಭಿವೃದ್ದಿ ಮಾಡಲು ಅರಣ್ಯ ಇಲಾಖೆ ಮುಂದಾದರೆ ಪಾಲಿಕೆಯಿಂದ ಅಗತ್ಯ ಧನಸಹಾಯ ನೀಡಲಾಗುವುದು ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಅರಣ್ಯ ಇಲಾಖೆಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು.
“ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎನ್ನುವುದನ್ನು ಯಾರೊಬ್ಬರು ಮರೆಯಬಾರದು. ಪ್ರಕೃತಿ ಉಚಿತವಾಗಿ ಊಟ ಕೊಡುತ್ತಿದೆ ಎಂದು ಅದನ್ನು ಕಂಠಪೂರ್ತಿ ತಿನ್ನಬಾರದು. ಭವಿಷ್ಯಕ್ಕೂ ಉಳಿಸಬೇಕು” ಎಂದು ತಿಳಿಸಿದರು.
“ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ʼಕ್ಲೈಮೆಟ್ ಆಕ್ಷನ್ ಕ್ಲಬ್ʼ ರಚನೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಬೆಂಗಳೂರಲ್ಲಿ 1.20 ಕೋಟಿಗೆ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ನಾವು ಆಲೋಚನೆ ಮಾಡಬೇಕಿದೆ” ಎಂದು ಹೇಳಿದರು.