

ರಾಯಚೂರು ವಿದ್ಯಾರ್ಥಿಗಳಿಗೆ ದೇಶದ ಆರ್ಥಿಕತೆ, ಪ್ರಾದೇಶಿಕ ಅಸಮತೋಲನದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಪರಿಹಾರದ ಮಾರ್ಗದರ್ಶನಗಳ ಬಗ್ಗೆ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರವಾಗಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರೂಪಾಯಿಯ ಸಮಸ್ಯೆ, ಅದರ ಮೌಲ್ಯ ಮತ್ತು ಪರಿಹಾರದ ಕುರಿತು ಹಾಗೂ ಪ್ರಾದೇಶಿಕ ಅಸಮತೋಲನ ಅದರ ಕಾರಣಗಳು ಹಾಗೂ ಪರಿಹಾರದ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನಲ್ಲಿ ಇಂದು ಹಾಗೂ ಮುಂದೆಯೂ ಪ್ರಸ್ತುತರಾಗಿರುತ್ತಾರೆ.
ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಿಂತಕರಾಗಿದ್ದ ಅಂಬೇಡ್ಕರ್ ಅವರು ದೇಶದ ಆರ್ಥಿಕತೆಯ ಬಗ್ಗೆ ಅನೇಕ ಅಂಶಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರು ಅವರ ಸಂದೇಶಗಳನ್ನು ಮನದಲ್ಲಿಟ್ಟುಕೊಂಡು, ಸಮುದಾಯಗಳ ವರ್ಗಗಳು ಹಾಗೂ ಆರ್ಥಿಕತೆಯ ಬಗ್ಗೆ ತಿಳಿದುಕೊಳ್ಳಬೇಕು. ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಪ್ರಾದೇಶಿಕ ಅಸಮತೋಲನೆ ಹೋಗಲಾಡಿಸಲು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮ-ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಜತೆಗೆ ಬಹುದೊಡ್ಡ ಆರ್ಥಿಕ ತಜ್ಞರಾಗಿದ್ದರು. ದೇಶದ ಹಣಕಾಸು, ಅರ್ಥಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿದೆ. ದೇಶದ ಆರ್ಥಿಕ ಬಲವರ್ಧನೆಗೆ ಜಾತಿ ವ್ಯವಸ್ಥೆ ಕಂಟಕವಾಗಿದೆ ಎಂದರು.
ವಿಚಾರ ಸಂಕಿರಣಕ್ಕೆ ಜಿಲ್ಲೆಯ ಸಿರವಾರ, ಸಿಂಧನೂರು ಸೇರಿದಂತೆ ಗಂಗಾವತಿ, ಬೀದರ್, ಕಲಬುರಗಿ, ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 34 ವಿವಿಧ ವಿಷಯಾಧಾರಿತ ಲೇಖನಗಳು ವಿಚಾರ ಸಂಕಿರಣಕ್ಕೆ ಸಲ್ಲಿಸಲಾಗಿತ್ತು. 400ಕ್ಕೂ ಅಧಿಕ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ಕಮಲ್ಕುಮಾರ್ ಜೈನ್, ಇನ್ನರ್ ವ್ಹೀಲ್ ಕ್ಲಬ್ನ
ಅಧ್ಯಕ್ಷೆ ಲಲಿತಾ ಸತ್ಯಕುಮಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾ ಶಾವಂತಗೇರಾ, ಕಾಲೇಜಿನ ಪ್ರಾಚಾರ್ಯ ಪ್ರೊ.ಯಂಕಣ್ಣ, ಪ್ರಾಧ್ಯಾಪಕ ಪ್ರೊ.ಪ್ರಾಣೇಶ ಕುಲಕರ್ಣಿ, ಡಾ.ಮಹಾಂತೇಶ ಅಂಗಡಿ ಸೇರಿದಂತೆ ಅನೇಕರು ಇದ್ದರು.
ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ರೂಪಾಯಿಯ ಸಮಸ್ಯೆ, ಅದರ ಮೌಲ್ಯ ಮತ್ತು ಪರಿಹಾರ ಎಂಬ ವಿಷಯದ ಕುರಿತು ಆರ್ಬಿಐ ಆರ್ಥಿಕ ಅಧ್ಯಯನ ಕೇಂದ್ರ ಹಾಗೂ ನೀತಿ ಕೇಂದ್ರದ ಮುಖ್ಯಸ್ಥ ಡಾ.ಕೃಷ್ಣರಾಜ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಆರ್ಥಿಕತೆಯನ್ನು ಉತ್ತಮಗೊಳಿಸಬೇಕಾದರೆ ಸಂಶೋಧನೆಯಿಂದ ಬಂದ ವರದಿಗಳನ್ನು ಆಧರಿಸಿ ಅವುಗಳನ್ನು ನೀತಿಗಳಾಗಿಸಬೇಕಿದೆ. ಸ್ಥಾಪಿತ ಜ್ಞಾನಗಳ ಕುರಿತು ಪ್ರಶ್ನೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕಿದೆ. ಆರ್ಬಿಐ ಆರ್ಥಿಕ ಅಧ್ಯಯನ ಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಸಂಶೋಧನೆಗಳನ್ನು ನೀತಿಗಳಾಗಿ ಮಾರ್ಪಾಡು ಮಾಡಬೇಕಿದೆ. ಸಂಪನ್ಮೂಲ ಕ್ರೋಢಿಕರಣ ಸಮಿತಿಯ ಸಲಹೆಗಳನ್ನು ಪರಿಗಣಿಸಬೇಕು ಎಂದರು.