

ಚಿಕ್ಕಮಗಳೂರು: ಪ್ರವಾಸೋದ್ಯಮದ ಜತೆಗೆ ಪರಿಸರವನ್ನೂ ಉಳಿಸುವ ಕೆಲಸ ಮಾಡಬೇಕಿದೆ. ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಪರಿಸರವನ್ನು ಉಳಿಸಿಕೊಳ್ಳದಿದ್ದಲ್ಲಿ ಮುಂದೊಂದು ದಿನ ಅಪಾಯ ನಿಶ್ಚಿತ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಆತಂಕ ವ್ಯಕ್ತಪಡಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೊರತೆ ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಬಗ್ಗೆ ರ‌್ಯಾಲಿಯಲ್ಲಿ ಭಾಗವಹಿಸಿದವರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಭಾರತ ವೈವಿಧ್ಯಮಯ ರಾಷ್ಟ್ರ. ಸಂಸ್ಕೃತಿ, ಪರಂಪರೆ, ಕ್ರೀಡೆಗೆ ಹೆಸರಾಗಿದೆ. ಬೇಲೂರು ಚನ್ನಕೇಶವ ದೇವಸ್ಥಾನವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಅಲ್ಲಿಗೆ ವಿದೇಶದಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತ್ತಿದೆ. ಇದರಿಂದ ಸ್ಥಳೀಯರು ಹಾಗೂ ಸರ್ಕಾರದ ಆದಾಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಲೋಹಿತ್ ಮಾತನಾಡಿ, ಕಳೆದ ವರ್ಷ ಗಿರಿ ತಪ್ಪಲನ್ನು ನೀಲಿ ಕುರಂಜಿ ಹೂಗಳು ವ್ಯಾಪಿಸಿಕೊಂಡಿದ್ದ ಕಾರಣ ಸುಮಾರು 60 ಲಕ್ಷ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು. ಇತ್ತೀಚೆಗೆ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಜೂನ್ ತಿಂಗಳಲ್ಲಿ 7 ಲಕ್ಷ ಮಂದಿ, ಆಗಸ್ಟ್‌ನಲ್ಲಿ 6 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಎಂದರೆ ಶೃಂಗೇರಿ, ಹೊರನಾಡು, ಮುಳ್ಳಯ್ಯನಗಿರಿ ಪ್ರದೇಶಗಳು ಮಾತ್ರ ಎನ್ನುವಂತಾಗಿತ್ತು. ಆದರೆ ಚಿಕ್ಕಮಗಳೂರು ಜಿಲ್ಲೆ ಎಲ್ಲ ರೀತಿಯ ಪ್ರವಾಸಕ್ಕೂ ಹೇಳಿಮಾಡಿಸಿದ ಪ್ರದೇಶ. ಈ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಇಲ್ಲದ ಪ್ರದೇಶಗಳ ಬಗ್ಗೆ ಪ್ರಚಾರ ಮಾಡಿ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ನಂ.1 ಸ್ಥಾನಕ್ಕೇರಿಸುವುದು ನಮ್ಮ ಉದ್ದೇಶ ಎಂದರು.
ಜಿಲ್ಲಾಡಳಿತ, ಹೋಂ ಸ್ಟೇ ಅಸೋಸಿಯೇಷನ್, ರೆಸಾರ್ಟ್ ಅಸೋಸಿಯೇಷನ್, ಜೀಪ್ ಚಾಲಕರ ಸಂಘಟನೆ ಎಲ್ಲರ ಸಹಕಾರದಲ್ಲಿ ಪ್ರವಾಸೋದ್ಯಮ ಹಾಗೂ ಹಸಿರು ಹೂಡಿಕೆ ಹೆಸರಿನಲ್ಲಿ ಪರಿಸರ ಪೂರಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ ಎಂದು ವಿವರಿಸಿದರು.