ಸುವರ್ಣ ಕರ್ನಾಟಕಕ್ಕೆ ಅಭಿವೃದ್ಧಿ ದಿಕ್ಸೂಚಿ; ಪ್ರಗತಿಯ ಹಾದಿಗೆ ತಜ್ಞರ ದೀವಟಿಗೆ

Kannada Rajyotsava
Published on

ಅಭಿವೃದ್ಧಿ ಕರ್ನಾಟಕಕ್ಕೆ ತಜ್ಞರು ನೀಡಿರುವ ಸಲಹೆಗಳನ್ನು ಸರ್ಕಾರ ತೆರೆದ ಮನಸ್ಸಿನಿಂದ ನೋಡಬೇಕು. ಇದು ವಿಜಯವಾಣಿಯ ಕಳಕಳಿ

ಬೆಂಗಳೂರು: ಅಂದಿನ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ಐವತ್ತು ವರ್ಷ ಪೂರ್ಣಗೊಂಡಿದೆ. ಈ ನಡು ಹರಯದಲ್ಲಿ ನಾಡು ಸಾಗಿ ಬಂದ ಹಾದಿಯನ್ನು ಒಮ್ಮೆ ತಿರುಗಿ ನೋಡಿದರೆ ರೋಮಾಂಚನಗೊಳ್ಳುವಂತಹ ಸಾಧನೆಗಳ ಹೆಜ್ಜೆ ಗುರುತುಗಳು ಕಣ್ಣ ಮುಂದೆ ಮೂಡುತ್ತವೆ. ಈ ಸವಿ ನೆನಪಿನ ಜತೆ ಜತೆಯಲ್ಲೇ ಬೇರೆ ಬೇರೆ ವಿಚಾರಗಳಲ್ಲಿ ರಾಷ್ಟ್ರದ ಎಷ್ಟೋ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ನಮ್ಮ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ. ಕರ್ನಾಟಕದ ಸುವರ್ಣ ಮಹೋತ್ಸವದ ಹಾದಿ ಹೂವಿನ ಹಾಸಾಗಿರಲಿಲ್ಲ. ಕಲ್ಲುಮುಳ್ಳಿನ ಹಾದಿಯಲ್ಲಿ ಏಳುಬೀಳು ಕಂಡು ಮುಂಚೂಣಿ ಸ್ಥಾನಕ್ಕೆ ತಲುಪಿದೆ. ಇಂದಿಗೂ ಹತ್ತಾರು ವಿಚಾರಗಳಲ್ಲಿ ರಾಷ್ಟ್ರ ಕರ್ನಾಟಕವನ್ನು ಗಮನಿಸುತ್ತಿರುತ್ತದೆ, ಅನುಕರಿಸುತ್ತದೆ ಕೂಡ. ಹೀಗಿರುವ ವಾತಾವರಣದಲ್ಲಿ ವಿಜಯವಾಣಿ ‘ಕರ್ನಾಟಕ ಮುಂದೇನು?’ ಘೋಷವಾಕ್ಯದಡಿ ಹತ್ತಾರು ಕ್ಷೇತ್ರಗಳಲ್ಲಿ ಮುಂದಿನ ದಶಕದಲ್ಲಿ ಆಗಲೇಬೇಕಿರುವ ಆಶಯ, ಕನಸುಗಳನ್ನು ಪಟ್ಟಿಮಾಡಿ ನಾಡಿನ ಮುಂದಿಡುವ ಪ್ರಯತ್ನ ಮಾಡಿದೆ. ನಿಪುಣರ ಅನುಭವ, ವಿಚಾರಧಾರೆಯು ಸರ್ಕಾರ ಹಾಗೂ ಜನ ಸಮುದಾಯಗಳಿಗೆ ಮಾರ್ಗಸೂಚಿಯಷ್ಟೇ ಅಲ್ಲ, ರಾಜ್ಯ ಸಾಗಬೇಕಾದ ದಾರಿಯ ದಿಕ್ಸೂಚಿಯೂ ಹೌದು. ಇದು ವಿಜಯವಾಣಿಯ ಕಳಕಳಿ ಕೂಡ.

ತಜ್ಞರ ಸಲಹೆಗಳೇನು?

  1. ಹೊಸ ಉದ್ಯೋಗಗಳಿಗೆ ಬೇಕಾದ ಕೌಶಲ, ತಂತ್ರಜ್ಞಾನ, ವೈದ್ಯಕೀಯತೆ, ಸಂವಹನ, ಭಾಷಾ, ಅನುವಾದ ಕೌಶಲಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು
  2. ಕೃತಕ ಬುದ್ಧಿಮತ್ತೆಯ ಮೂಲ ಗಣಿತದಲ್ಲಿದೆ. ಗ್ರಾಮೀಣ ಮಕ್ಕಳಿಗೆ ಸಾಮಾನ್ಯ ಪದವಿಗಳ ಜತೆಗೆ ಗಣಿತದಲ್ಲಿ ಆಸಕ್ತಿ ಬೆಳೆಸುವುದು ಅಗತ್ಯ
  3. ಚಿಕ್ಕ ಮಕ್ಕಳಿಗೂ ಕಾಡುತ್ತಿರುವ ಬೊಜ್ಜು, ಕ್ಯಾನ್ಸರ್ ಪತ್ತೆಹಚ್ಚಿ ಮುಂಚಿತವಾಗಿ ಗುಣಪಡಿಸಲು ಆರೋಗ್ಯ ತಪಾಸಣೆ ಅವಶ್ಯ
  4. ಕರ್ನಾಟಕದ ಚರಿತ್ರೆ, ಪರಂಪರೆ, ಕನ್ನಡ ಸಂಬಂಧ, ಸಂಸ್ಕೃತಿಯ ಬೇರಿನೊಂದಿಗೆ ಕನ್ನಡವನ್ನು ಅನ್ನದ ಭಾಷೆಯಾಗಿಸಬೇಕು
  5. ಏಕಗವಾಕ್ಷಿ ರೀತಿಯಲ್ಲಿ ವ್ಯವಸ್ಥೆ ಅಣಿಗೊಳಿಸಿ, ಯೋಜನಾ ಪ್ರಸ್ತಾವನೆಗಳಿಗೆ 24 ತಾಸಿನಲ್ಲಿ ಅನುಮೋದಿಸುವ ವ್ಯವಸ್ಥೆ ಆಗಲಿ
  6. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಸಣ್ಣ ನೀರಾವರಿ, ಸಹಿತ ಕೃಷಿ ಸಂಬಂಧಿತ ವಲಯಗಳ ಇಲಾಖೆಗಳ ವಿಲೀನವಾಗಲಿ
  7. ಜಲಾನಯನ ಪ್ರದೇಶದ ಕೆಳ ಭಾಗದಲ್ಲಿ ತೇಲುವ ಸೌರ ಫಲಕ ಅಳವಡಿಸಿದರೆ ವಿದ್ಯುತ್ ಸಾಮರ್ಥ್ಯ ವೃದ್ಧಿ ಆಗಿ ಕಲ್ಲಿದ್ದಲು ಹೊರೆ ಇಳಿಕೆ
  8. ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಲಿಸಿದರೆ ನಮ್ಮಲ್ಲಿ ರಸ್ತೆ ಸಂಪರ್ಕ ಜಾಲ ಅತ್ಯಂತ ದುರ್ಬಲ, ಬಲಿಷ್ಠ ಸಂಪರ್ಕ ಜಾಲ ಆರ್ಥಿಕತೆಗೆ ಉತ್ತೇಜಿಸುತ್ತದೆ
  9. ಕಾವೇರಿ, ಕೃಷ್ಣಾ, ಗೋದಾವರಿ ಸೇರಿ ರಾಜ್ಯದ ಪಾಲಿನ ಬಹುತೇಕ ಟ್ರಿಬ್ಯೂನಲ್​ಗಳು ಅಂತಿಮ ತೀರ್ಪು ಕೊಟ್ಟಾಗಿದೆ. ಲಭ್ಯತೆ ಖಾತರಿ, ಶೇಖರಣೆ, ಸಮರ್ಪಕ ಬಳಕೆಗೆ ಗಮನಹರಿಸಬೇಕು
  10. ಪ್ರವಾಸೋದ್ಯಮದ ಮಾರ್ಕೆಟಿಂಗ್​ಗೆ ಒಂದಿಷ್ಟು ಧಾರಾಳತನ ಬೇಕು. ಪರಿಧಿಯಾಚೆ ಮಾರುಕಟ್ಟೆ ವಿಸ್ತರಿಸಿದರೆ ಹೂಡಿಕೆ ಹೆಚ್ಚಾಗಿ ಹರಿದು ಬರಲಿದೆ

ಈ ದಿನ ಕರ್ನಾಟಕದ ಏಕೀಕರಣ ಮತ್ತು ನಮ್ಮ ಜನರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುತ್ತೇವೆ. ಕರ್ನಾಟಕ ರಾಜ್ಯದ ಏಕತೆ ಮತ್ತು ಏಳಿಗೆಗಾಗಿ ಹೋರಾಡಿದ ದಾರ್ಶನಿಕರನ್ನು ಸ್ಮರಿಸೋಣ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ.

ಥಾವರ್​ಚಂದ್ ಗೆಹಲೋತ್ ರಾಜ್ಯಪಾಲ

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ. ಅದಕ್ಕೆ ಪೂರಕವಾಗಿ ಅನೇಕ ಯೋಜನೆ ರೂಪಿಸಿ ಜಾರಿ ಮಾಡಿದ್ದೇವೆ. ರಾಜ್ಯದ ಆರ್ಥಿಕ ಬೆಳವಣಿಗೆ, ಅಭಿವೃದ್ಧಿ ಸೇರಿ ಅನೇಕ ವಿಷಯಗಳಲ್ಲಿ ನಾವು ಬೇರೆ ರಾಜ್ಯಗಳಿಗಿಂತ ಮುಂದಿದ್ದೇವೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net