

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವ ಕೆ.ಗೋಪಾಲಯ್ಯ, ತಮ್ಮನ್ನು ಮೂರು ಬಾರಿ ಗೆಲ್ಲಿಸಿದ ಮಹಾಲಕ್ಷ್ಮೀಲೇಔಟ್ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬಿಬಿಎಂಪಿ ಅನುದಾನದಲ್ಲಿ ಜಯಪ್ರಕಾಶ್ ನಾರಾಯಣ್ ಕೇಂದ್ರ ಸ್ಥಾಪಿಸಿ, ಕಡಿಮೆ ದರದಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಹಾಗೆಯೇ, ನಂದಿನಿ ಬಡಾವಣೆ, ಶಕ್ತಿಗಣಪತಿನಗರ, ಕೇತಮಾರನಹಳ್ಳಿ, ರಾಜಾಜಿನಗರ 1ನೇ ಆರ್ ಬ್ಲಾಕ್, ಪೈಪ್ಲೈನ್ ರಸ್ತೆಯಲ್ಲಿನ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಂದಿನಿ ಲೇಔಟ್ನಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣ, ಗೆಳೆಯರ ಬಳಗದಲ್ಲಿ ಡಾ.ರಾಜ್ಕುಮಾರ್ ಕ್ರೀಡಾಂಗಣ, ಕಮಲಮ್ಮನಗುಂಡಿ ಆಟದ ಮೈದಾನ ನವೀಕರಣ ಮಾಡಲಾಗಿದೆ.
ವಸತಿ ಹೀನರಿಗೆ ಸೂರು: ಕ್ಷೇತ್ರ ವ್ಯಾಪ್ತಿಯಲ್ಲಿನ 7 ವಾರ್ಡ್ಗಳಲ್ಲಿ ಪ್ರತಿ ವಾರ್ಡ್ನಲ್ಲೂ 100 ಜನರಿಗೆ ಬಿಬಿಎಂಪಿಯ ಒಂಟಿ ಮನೆ ಯೋಜನೆಯಡಿ, ಮನೆ ನಿರ್ವಣಕ್ಕೆ ಅನುದಾನ ಕೊಡಿಸಲಾಗಿದೆ. ಜತೆಗೆ ಹಕ್ಕುಪತ್ರವಿರುವ 600ಕ್ಕೂ ಹೆಚ್ಚಿನ ಕುಟುಂಬದವರಿಗೆ ಕ್ರಯಪತ್ರ ನೋಂದಣಿ ಮಾಡಿಸಿಕೊಡಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 450 ಮನೆ ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಇನ್ನಿತರ ಅಭಿವೃದ್ಧಿ ಕಾಮಗಾರಿಗಳು: ವೈಯಕ್ತಿಕ ಯೋಜನೆಗಳಷ್ಟೇ ಅಲ್ಲದೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಇತ್ತೀಚೆಗೆ 300 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜತೆಗೆ 40 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮ ಕಾರ್ಡ್ ರಸ್ತೆಯಿಂದ ಹೊರವರ್ತಲ ರಸ್ತೆವರೆಗಿನ ಸಂಪರ್ಕ ರಸ್ತೆ ನಿರ್ವಣ, ಶಕ್ತಿಗಣಪತಿ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆ ನಿರ್ಮಾಣ ಅಂತಿಮ ಹಂತದಲ್ಲಿದೆ.
81 ಲಕ್ಷ ರೂ. ದಂಡ ವಸೂಲಿ
ತೂಕ-ಅಳತೆ: ತೂಕ ಮತ್ತು ಅಳತೆ ತಪಾಸಣೆಯಲ್ಲಿ 26,346 ಪ್ರಕರಣಗಳನ್ನು ತಪಾಸಣೆ ಮಾಡಿದ್ದು, 3217 ಪ್ರಕರಣ ದಾಖಲು ಮಾಡಿ 64.44 ಲಕ್ಷ ರೂ. ದಂಡ ವಿಧಿಸಲಾಗಿದೆ. 7951 ದಿನಸಿ ಅಂಗಡಿ ತಪಾಸಣೆ ಮಾಡಿ, 17.41 ಲಕ್ಷ ರೂ. ದಂಡ ಹಾಕಲಾಗಿದೆ.
ನ್ಯಾಯಬೆಲೆ ಅಂಗಡಿ: ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ಪಡಿತರ ನೀಡದ 10,820 ಪ್ರಕರಣ ತಪಾಸಣೆ ಮಾಡಿದ್ದು, 1611 ಮೊಕದ್ದಮೆ ದಾಖಲಿಸಿ 21.55 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಅಗತ್ಯ ವಸ್ತಗಳು: ಅಗತ್ಯ ವಸ್ತುಗಳನ್ನು ಪೊಟ್ಟಣ ಸಾಮಗ್ರಿ ರೂಪದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ 1043 ಮೊಕದ್ದಮೆ ದಾಖಲಿಸಿ 21.18 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಮಾಸ್ಕ್, ಸ್ಯಾನಿಟೈಜರ್
ಕರೊನಾ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ 276 ಪ್ರಕರಣದಲ್ಲಿ 12.62 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. 7575 ಕಡೆಯಲ್ಲಿ ತಪಾಸಣೆ ಮಾಡಲಾಗಿತ್ತು. 287 ಇನ್ನಿತರ ಪ್ರಕರಣ ದಾಖಲು ಮಾಡಿ 9.08 ಲಕ್ಷ ರೂ. ದಂಡ ಹಾಕಲಾಗಿದೆ.
45 ಸಾವಿರ ಆಹಾರ ಕಿಟ್ ವಿತರಣೆ
ಕರೊನಾ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಆಹಾರದ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹಲವು ನೆರವನ್ನು ನೀಡಲಾಗಿದೆ. ಅದರಂತೆ ಈವರೆಗೆ 45 ಸಾವಿರ ಜನರಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆ, ಎಣ್ಣೆ ಸೇರಿ ಇನ್ನಿತರ ಆಹಾರ ಪದಾರ್ಥಗಳಿರುವ ಕಿಟ್ ವಿತರಿಸಲಾಗಿದೆ. ಜತೆಗೆ, ಕ್ಷೇತ್ರದಲ್ಲಿದ್ದ ವಲಸೆ ಕಟ್ಟಡ ಕಾರ್ವಿುಕರು ಊರಿಗೆ ಸೇರಲು 50ಕ್ಕೂ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.