ದೇವದುರ್ಗ: ಪಟ್ಟಣದ ಎಜುಕೇಷನ್ ಲೇಔಟ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೂಲಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಮೇಲ್ನೋಟಕ್ಕೆ ದೊಡ್ಡ ಬಿಲ್ಡಿಂಗ್‌ಕಂಡರೂ ಒಳಗಡೆ ಸೌಲಭ್ಯವಿಲ್ಲದೆ ಬಣಬಣ ಎನ್ನುತ್ತಿದೆ.
ಕಾಲೇಜಿನಲ್ಲಿ 6ಸೆಮಿಸ್ಟರ್‌ನಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, 40ನೌಕರರಿದ್ದಾರೆ. ಎರಡು ತಿಂಗಳಿನಿಂದ ಜೀವಜಲಕ್ಕಾಗಿ ತೀವ್ರ ಸಂಕಷ್ಟವಾಗಿದೆ. ಮೊದಲೇ ಕಾಲೇಜು ಗುಡ್ಡದಲ್ಲಿದ್ದು ನೀರಿಲ್ಲದೆ ಬಿಸಿಲಿನ ತಾಪಕ್ಕೆ ವಿದ್ಯಾರ್ಥಿಗಳು ತತ್ತರಿಸುತ್ತಿದ್ದಾರೆ. ಮೂಲಸೌಲಭ್ಯ ಹಾಗೂ ಆಡಳಿತ ನಿರ್ವಹಣೆಗೆ ಕಾಲೇಜಿನ ಪಿಡಿ ಅಕೌಂಟ್‌ನಲ್ಲಿ ಅನುದಾನವಿದ್ದರೂ ಬಳಕೆಗೆ ಮೀನಮೇಷ ಎಣಿಸಲಾಗುತ್ತಿದೆ.
ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗಿದ್ದು ಸಮರ್ಪಕ ಸೌಲಭ್ಯ ನೀಡದೆ ಕಾಲೇಜಿಗೆ ಹಸ್ತಾಂತರ ಮಾಡಲಾಗಿದೆ. ಬಿಲ್ಡಿಂಗ್ ಕಟ್ಟುವಾಗ ಕೊರೆಸಿದ ಬೋರ್‌ವೆಲ್ ಇಲ್ಲಿಯವರೆಗೆ ಕುಡಿವ ನೀರಿಗೆ ಆಸರೆಯಾಗಿತ್ತು. ಕಟ್ಟಡಕ್ಕೆ ನೀರುಣಿಸಲು ಸಿಂಕ್(ತೊಟ್ಟಿ) ನಿರ್ಮಿಸಲಾಗಿತ್ತು. ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಿದ್ದ ಕಾರಣ ಸಿಂಕ್‌ಗೆ ನೀರುಬಿಟ್ಟು ಅಲ್ಲಿಂದ ಕಟ್ಟಡದ ಕ್ಯೂರಿಂಗ್‌ಗೆ ಬಳಸಲಾಗುತ್ತಿತ್ತು.
ನೀರಿನ ಸೌಲಭ್ಯ ಕಲ್ಪಿಸದ ಕಾರಣ ಅದೇ ಸಿಂಕ್‌ನೀರನ್ನೇ ಕಿರುಪಂಸೆಟ್‌ನಿಂದ ಮೇಲೆತ್ತಿ ಕುಡಿಯಲು ಬಳಸಲಾಗುತ್ತಿದೆ. ಕಡುಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಕುಸಿದು ಬೋರ್‌ವೆಲ್‌ನಲ್ಲಿ ನೀರು ಖಾಲಿಯಾಗಿವೆ. ಅಲ್ಲದೆ ಮೋಟರ್‌ಸುಟ್ಟಿದ್ದು ರಿಪೇರಿಗೆ ಪ್ರಾಂಶುಪಾಲರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳಿವೆ. ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ಮನೆಯಿಂದ ಬಾಟಲ್‌ನಲ್ಲಿ ನೀರು ತರುತ್ತಿದ್ದಾರೆ. ನೀರಿನ ಕೊರತೆಯಿಂದ ಎರಡ್ಮೂರು ತಿಂಗಳಿನಿಂದ ಶೌಚಗೃಹಗಳಿಗೆ ಬೀಗ ಜಡಿಯಲಾಗಿದೆ.
ಇದನ್ನೂ ಓದಿ: ಸರ್ಕಾರಿ ಕಾಲೇಜುಗಳಲ್ಲಿ ಮೌಲ್ಯಯುತ ಶಿಕ್ಷಣ
ಕಾಲೇಜಿನಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, 10ಕ್ಕೂ ಹೆಚ್ಚು ಮಹಿಳಾ ನೌಕರರಿದ್ದು ಶೌಚಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹೊರಗಡೆ ಹೋದರೆ, ಮಹಿಳೆಯರು ದೂರದ ಹಾಸ್ಟೆಲ್‌ಗೆ ಹೋಗುವ ಸ್ಥಿತಿಯಿದೆ.
ಬಿಲ್ಡಿಂಗ್‌ಗೆ ಸಮರ್ಪಕವಾಗಿ ಎಲೆಕ್ಟ್ರಾನಿಕ್ ವರ್ಕ ಮಾಡದ ಕಾರಣ, ವರ್ಕ್‌ಶಾಪ್‌ನಲ್ಲಿ ಮೆಕಾನಿಕ್ ಮಶೀನ್ ಬಳಕೆಯಾಗುತ್ತಿಲ್ಲ. ಪ್ರಾಯೋಗಿಕ ಸಲಕರಣೆ, ಪ್ರಯೋಗ ಮಾಡಿ ತೋರಿಸಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡರೂ ಪ್ರಾಚಾರ್ಯರು ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳಿವೆ.
ಪಟ್ಟಣದಿಂದ 3-4 ಕಿಮೀ ದೂರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 6ಸೆಮಿಸ್ಟರ್(3ವರ್ಷ)ಗಳಿದ್ದು ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸೆಮ್‌ನಲ್ಲಿ ನಾಲ್ಕು ವಿಭಾಗಗಳಿವೆ. ಸಿವಿಲ್ ಇಂಜಿನಿಯರಿಂಗ್, ಮೆಕಾನಿಕ್ ವಿಭಾಗ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ ವಿಭಾಗವಿದೆ. ಪ್ರತಿ ವಿಭಾಗಕ್ಕೆ 60 ವಿದ್ಯಾರ್ಥಿಗಳ ದಾಖಲೆಗೆ ಅವಕಾಶವಿದೆ. ಇದಲ್ಲದೆ 80ಹುದ್ದೆಗಳು ಮಂಜೂರಾಗಿದ್ದು ಕೇವಲ 40ನೌಕರರಿದ್ದಾರೆ.
ಪ್ರಾಚಾರ್ಯರು, 12ಕಾಯಂ ಪ್ರಾಧ್ಯಾಪಕರು, 15ಅತಿಥಿ ಉಪನ್ಯಾಸಕರು, 5 ಸ್ಟಾಪ್, 6ಜನ ಡಿ ಗ್ರೇಡ್ ನೌಕರರಿದ್ದಾರೆ. ಇವರನ್ನು ಸೇರಿ ಸುಮಾರು 300 ಜನರಿದ್ದಾರೆ. ಎಷ್ಟೇ ನೀರು ತರಿಸಿದರೂ ಸಾಲುತ್ತಿಲ್ಲ. ವಿಭಾಗಕ್ಕೆ ಒಬ್ಬರು ಲ್ಯಾಬ್ ಇನ್‌ಸ್ಯಾಕ್ಟರ್‌ನಂತೆ ಕನಿಷ್ಠ ನಾಲ್ವರು ಇರಬೇಕು. ಆದರೆ, ಒಬ್ಬರೇ ಲ್ಯಾಬ್ ಇನ್‌ಸ್ಯಾಕ್ಟರ್ ಇದ್ದು, 12ವಿಭಾಗದ ವಿದ್ಯಾರ್ಥಿಗಳಿಗೆ ಒಬ್ಬರೇ ಲ್ಯಾಬ್ ಪ್ರಯೋಗ ತರಬೇತಿ ನೀಡುವ ಸ್ಥಿತಿಯಿದೆ. ಅಗತ್ಯ ಪ್ರಾಯೋಗಿಕ ಉಪಕರಣವಿದ್ದರೂ ನೌಕರರ ಕೊರತೆ, ವಿದ್ಯುತ್ ಸಮಸ್ಯೆಯಿಂದ ತುಕ್ಕುಹಿಡಿದಿವೆ.
ಬೋರ್‌ವೆಲ್‌ನಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಕೊರತೆಯಾಗಿದೆ. ಸದ್ಯ ಕ್ಯಾನ್‌ನೀರು ತರಿಸಲಾಗುತ್ತಿದೆ. ಹೊಸ ಬೋರ್‌ವೆಲ್ ಕೊರೆಸಿ ಪಂಪ್‌ಸೆಟ್ ಇಳಿಸಲು ಅನುದಾನ ಕೊರತೆಯಿದೆ. ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗುವುದು. ಕುಡಿಯಲು ಹಾಗೂ ಶೌಚಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ.| ಟಿ.ಶಿವಕುಮಾರ, ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪಾಲಿಟೆಕ್ನಿಕ್ ಕಾಲೇಜು ಮೇಲ್ನೋಟಕ್ಕೆ ಬಿಲ್ಡಿಂಗ್ ಇದ್ದರೂ ಒಳಗೆ ಸಮಸ್ಯೆಗಳಿವೆ. ಕಲುಷಿತ ನೀರನ್ನು ವಿದ್ಯಾರ್ಥಿಗಳಿಗೆ ಕುಡಿಸಲಾಗುತ್ತಿದೆ. ಇದರಿಂದ ಆರೋಗ್ಯ ಹೆಚ್ಚು ಕಡಿಮೆಯಾದರೆ ಯಾರುಗತಿ ?. ಮಕ್ಕಳಿಂದ ಶುಲ್ಕ ಪಡೆಯುತ್ತಾರೆ. ಅದಲ್ಲದೆ ಕಾಲೇಜಿನ ಪಿಡಿ ಅಕೌಂಟ್‌ನಲ್ಲಿ ಅನುದಾನವಿದೆ. ಬಳಸಿ ಹೊಸಬೋರ್‌ವೆಲ್ ಕೊರೆದು ನೀರು ಪೂರೈಸಬೇಕು. ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು.| ಬಸವರಾಜ ಕೊಪ್ಪರ, ಪಾಲಕರು ಹಾಗೂ ಹಂಪಿ ವಿವಿ ಸಿಂಡಿಕೇಟ್ ಮಾಜಿ ಸದಸ್ಯ