ಔಷಧ ಮಾಫಿಯಾ ತಡೆಗೆ ಸಂಕಲ್ಪ: ವಿಜಯವಾಣಿ ಜತೆಗಿನ ಸಂವಾದದಲ್ಲಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಮಾಹಿತಿ

Dinesh Gundurao 2
Published on

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಔಷಧ&ಉಪಕರಣ ಖರೀದಿಯಲ್ಲಿ ಲಾಬಿ, ಏಜೆಂಟರ ಹಾವಳಿ ತಡೆಯುವ ಮೂಲಕ ಮಾಫಿಯಾ ಮಟ್ಟ ಹಾಕಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮದಲ್ಲಿ (ಕೆಎಸ್​ಎಂಎಸ್​ಸಿಎಲ್​) ಆಮೂಲಾಗ್ರ ಬದಲಾವಣೆ ತರಲು ಪರಿಣತರೊಬ್ಬರನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

"ವಿಜಯವಾಣಿ' ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೆಎಸ್​ಎಂಎಸ್​ಸಿಎಲ್​ ಕಾರ್ಯಮತೆ ಸರಿಯಿಲ್ಲ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿದೆ. ಸರಿಯಾದ ಸಮಯಕ್ಕೆ ಔಷಧ, ಉಪಕರಣ ಖರೀದಿ ಮಾಡಿ ಪೂರೈಕೆ ಮಾಡುತ್ತಿಲ್ಲ. ಇದಕ್ಕಾಗಿ ನಿಗದಿಪಡಿಸಿರುವ ಹಣ ಕೂಡ ರ್ಖಚಾಗುತ್ತಿಲ್ಲ. ಅಲ್ಲಿ ಸಿಬ್ಬಂದಿ ಕೊರತೆ ಇದೆ. ವ್ಯವಸ್ಥೆ ಸರಿಯಿಲ್ಲ. ಯಾವ ರೀತಿ ಟೆಂಡರ್​ ಕರೆಯಬೇಕು? ಯಾವ ರೀತಿ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಅತ್ಯವಶ್ಯಕ ಔಷಧ ಖರೀದಿಸಿ ಸರಬರಾಜು ಮಾಡಬೇಕು. ಆದರೆ ಅದು ಆಗುತ್ತಿಲ್ಲ. ಈ ನಿಗಮಕ್ಕೆ ದುಡ್ಡಿನ ಕೊರತೆ ಇಲ್ಲ. ಆದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಿಲ್ಲ. ಹಾಗಾಗಿ ಆಸ್ಪತ್ರೆಗಳಲ್ಲಿ ಔಷಧ, ಉಪಕರಣ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಸ್ಥಳಿಯವಾಗಿಯೇ ಖರೀದಿ ಮಾಡುವಂತೆ ಸೂಚಿಸಿದ್ದೇವೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ, ಗುಣಮಟ್ಟದ ಚಿಕಿತ್ಸೆ ಸಿಗದೆ ಹೋದರೆ ಸರ್ಕಾರಿ ಆಸ್ಪತ್ರೆಗಳ ಆಶಯ, ಉದ್ದೇಶ ಸಲವಾಗುವುದಿಲ್ಲ. ಆಸ್ಪತ್ರೆಗಳ ಮೌಲ್ಯ ಕಡಿಮೆಯಾಗುತ್ತದೆ. ಚಿಕಿತ್ಸೆ ನೀಡಿ, ಚೀಟಿ ಬರೆದುಕೊಟ್ಟ ಕೂಡಲೇ ರೋಗಿಗಳಿಗೆ ಅಲ್ಲೇ ಉಚಿತವಾಗಿ ಎಲ್ಲ ಬಗೆಯ ಔಷಧ ದೊರೆಯಬೇಕು. ಆದರೆ ಅದಾಗುತ್ತಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಹಿಂದಿನ ಸರ್ಕಾರದ ಅವಧಿಯಲ್ಲಂತೂ ನಿಗಮ ಅನೇಕ ಎಡವಟ್ಟುಗಳನ್ನು ಮಾಡಿದೆ. ಇವೆಲ್ಲವನ್ನೂ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞ ಸಲಹೆಗಾರರನ್ನು ನೇಮಕ ಮಾಡಿದ್ದೇವೆ. ಆರು ತಿಂಗಳಲ್ಲಿ ವರದಿ ಸರ್ಕಾರದ ಕೈಸೇರಲಿದೆ. ಅದನ್ನು ಪರಿಶೀಲಿಸಿ ಇಡೀ ನಿಗಮ ಪುನಾರಚನೆ ಮಾಡುತ್ತೇವೆ ಎಂದು ಹೇಳಿದರು.

ಸಿಎಸ್​ಆರ್​ ಬಳಕೆಗೂ ಚಿಂತನೆ: ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಿಎಸ್​ಆರ್​ ನೆರವು ನೀಡಲು ಸಾಕಷ್ಟು ಮಂದಿ ಮುಂದೆ ಬರುತ್ತಾರೆ. ಅದನ್ನೂ ನಾವು ಲಿಂಕ್​ ಮಾಡುತ್ತೇವೆ. ಇರುವ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವುದು ನಮ್ಮ ಮೊದಲ ಆದ್ಯತೆ. ದಾಸರಹಳ್ಳಿ, ಗೋವಿಂದರಾಜ ನಗರ ಸೇರಿದಂತೆ ಅನೇಕ ಕಡೆ ನೂರಾರು ಕೋಟಿ ರೂ. ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ ಸಿಬ್ಬಂದಿ ಮತ್ತಿತರ ಕೊರತೆಯಿಂದ ಅಲ್ಲಿ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕಿಂತ ಈಗಿರುವುದನ್ನು ಸರಿದಾರಿಗೆ ತರುವುದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು.

800 ಸಿಬ್ಬಂದಿ ನೇಮಕ: ಇಲಾಖೆಯಲ್ಲಿ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ತಂತ್ರಜ್ಞರು, ಚಾಲಕರು, ಡಿ ವೃಂದದ ನೌಕರರ ಕೊರತೆ ಸಾಕಷ್ಟಿದೆ. ಈಗ 800 ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ 300 ಹುದ್ದೆ ಕಲ್ಯಾಣ ಕರ್ನಾಟಕ, ಇತರೆ 500 ಹುದ್ದೆ ಸೇರಿವೆ. 2 ತಿಂಗಳಲ್ಲಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಗ್ರಾಮೀಣ ಸೇವೆ ಕಡ್ಡಾಯ ಆಗಿರುವುದರಿಂದ ವೈದ್ಯರ ಕೊರತೆ ಅಷ್ಟಾಗಿ ನಮ್ಮನ್ನು ಬಾಧಿಸುತ್ತಿಲ್ಲ. ತೀರಾ ಅಗತ್ಯ ಬಿದ್ದರೆ ಗುತ್ತಿಗೆ ಮೇಲೂ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಆದರೆ ತಜ್ಞ ವೈದ್ಯರ ಸಮಸ್ಯೆ ದೊಡ್ಡದಾಗಿದೆ. ತಜ್ಞ ವೈದ್ಯರು ತಾಲೂಕು ಕೇಂದ್ರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಕೇಂದ್ರ, ಬೆಂಗಳೂರು ಸೇರಿದಂತೆ ಮುಖ್ಯ ನಗರಗಳಲ್ಲಿ ಮಾತ್ರ ತಜ್ಞ ವೈದ್ಯರ ಸೇವೆ ದೊರೆಯುತ್ತದೆ. ತಾಲೂಕು ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಪ್ರಯತ್ನವೂ ಲ ನೀಡುತ್ತಿಲ್ಲ. ನಾವು ಕೊಡುವ ಸಂಬಳಕ್ಕಿಂತ ಅವರ ನಿರೀಕ್ಷೆ ಹೆಚ್ಚಿರಬಹುದು. ಆ ಬಗ್ಗೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ದರ ಪರಿಷ್ಕರಣೆ ಚಿಂತನೆ: ಆರೋಗ್ಯ ಕರ್ನಾಟಕ-ಆಯುಷ್ಮಾನ್​ ಭಾರತ್​ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಚಿಕಿತ್ಸಾ ವೆಚ್ಚವನ್ನು ಪರಿಷ್ಕರಿಸಬೇಕಾದ ಅಗತ್ಯತೆ ಇದೆ. ಅನೇಕ ಆಸ್ಪತ್ರೆಗಳು ದರ ಕಡಿಮೆ ಎಂಬ ಕಾರಣಕ್ಕೆ ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕಿವೆ. ಬಹಳ ಹಿಂದೆ ಇದ್ದ ದರವೇ ಈಗಲೂ ಮುಂದುವರಿದಿದೆ. ಹಾಗಾಗಿ ದರ ಪರಿಷ್ಕರಿಸುವುದು ಅವಶ್ಯ ಕೂಡ ಹೌದು. ಆ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

  • ಕೆಎಸ್​ಎಂಎಸ್​ಸಿಎಲ್​ ಪುನಾರಚನೆಗೆ ದಿಟ್ಟ ಹೆಜ್ಜೆ
  • ಲಾಬಿ, ಏಜೆಂಟ್​ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ
  • ಆಸ್ಪತ್ರೆ ದುರಸ್ತಿಗೆ 400-500 ಕೋಟಿ ವೆಚ್ಚದ ವರದಿ ಸಿದ್ಧ
  • ಎರಡು ತಿಂಗಳಲ್ಲಿ 800 ಹುದ್ದೆ ಭರ್ತಿ
  • ಎಬಿಎಕೆ ಚಿಕಿತ್ಸಾ ದರ ಪರಿಷ್ಕರಣೆಗೆ ಗಂಭೀರ ಚಿಂತನೆ

ಏಜೆಂಟರಿಗೆ ಕಡಿವಾಣ ನಿಶ್ಚಿತ: ಕೆಎಸ್​ಎಂಎಸ್​ಸಿಎನ್​ನಲ್ಲಿ ಯಾವುದೇ ನೀತಿ, ನಿಯಮಗಳ ಸರಿಯಾಗಿ ಪಾಲನೆಯಾಗುತ್ತಿಲ್ಲ. ಐಸಿಯು ಬೆಡ್​, ದೊಡ್ಡ ದೊಡ್ಡ ಉಪಕರಣ ಖರೀದಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ಏಜೆಂಟರು ಲಾಬಿ ಮಾಡುತ್ತಾರೆ. ಹತ್ತಿಪ್ಪತ್ತು ವರ್ಷಗಳಿಂದ ಕೆಲವೇ ಕೆಲವು ಏಜೆನ್ಸಿಗಳಿಗೆ ಟೆಂಡರ್​ ಹೋಗುತ್ತಿದೆ. ಯಾವ ಕಂಪನಿಯೂ ಟೆಂಡರ್​ಗೆ ಬರುವುದಿಲ್ಲ. ಏಜೆಂಟರೇ ಆ ಎಲ್ಲ ಕೆಲಸ ನೋಡಿಕೊಳ್ಳುತ್ತಾರೆ. ಈ ವ್ಯವಸ್ಥೆ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

400-500 ಕೋಟಿ ರೂ. ಯೋಜನೆ: ಹೊಸ ಆಸ್ಪತ್ರೆ ಕಟ್ಟಡ ಕಟ್ಟಲು ತೋರುವ ಉತ್ಸುಕತೆಯನ್ನು ಹಳೆಯ ಆಸ್ಪತ್ರೆ ಕಟ್ಟಡಗಳ ದುರಸ್ತಿಗೆ ತೋರುವುದಿಲ್ಲ. ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳು ಶಿಥಿಲಗೊಂಡಿವೆ. ಕೆಲವು ಕೊಠಡಿಗಳು ದುರಸ್ತಿಗೆ ಬಂದಿವೆ. ಹೊಸದಕ್ಕಿಂತ ಈಗಿರುವುದನ್ನೇ ಸುಸ್ಥಿತಿಗೆ ತರುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ವರದಿಯೊಂದನ್ನು ಸಿದ್ಧಪಡಿಸಿದ್ದು, 400-500 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿ ಮಾಡಿಸಬೇಕಿದೆ. ಎರಡು ವರ್ಷದಲ್ಲಿ ಎಲ್ಲ ಆಸ್ಪತ್ರೆಗಳ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಅನೇಕ ಆಸ್ಪತ್ರೆಗಳ ಛಾವಣಿ ಬಿದ್ದಿವೆ. ಶೌಚಗೃಹ ಶಿಥಿಲಾವಸ್ಥೆ ತಲುಪಿವೆ. ಕೊಠಡಿಗಳು ಹಳತಾಗಿವೆ. ಸ್ಯಾನಿಟರಿ ಸಮಸ್ಯೆ ಇದೆ. ಪೇಂಟ್​, ವೈಟ್​ ವಾಷ್​ ಆಗಬೇಕಿದೆ. ಅದೆಲ್ಲವನ್ನೂ ಹಂತ ಹಂತವಾಗಿ ಮಾಡಲು ಯೋಜನೆಯೊಂದನ್ನು ಸಿದ್ಧಪಡಿಸಿರುವುದಾಗಿ ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net