ಮುಗಿದ ಫೈಟ್, ಪ್ರಕಟವಾಯ್ತು ಕೈ ಟಿಕೆಟ್: 20 ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಹಾಲಿ ಸದಸ್ಯರ ಪೈಕಿ ಕೆಲವರಿಗಿಲ್ಲ ಅವಕಾಶ

1193012
Published on

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ನ 20 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಗೆ 17 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಸಂಜೆ ಪ್ರಕಟಿಸಿದ್ದ ಕಾಂಗ್ರೆಸ್, 3 ಕ್ಷೇತ್ರಗಳಿಗೆ ತಡರಾತ್ರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತು. ಬೀದರ್, ಬೆಂಗಳೂರು ನಗರ ಹಾಗೂ ಕೋಲಾರ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದರಿಂದ ಹೈಕಮಾಂಡ್ ರಾಜ್ಯ ಮುಖಂಡರೊಂದಿಗೆ ರ್ಚಚಿಸಿ ರಾತ್ರಿ ಅಂತಿಮಗೊಳಿಸಿತು.

ಬೆಂಗಳೂರು ನಗರ ಕ್ಷೇತ್ರದಲ್ಲಿ ಚೇತನಗೌಡ ಹಾಗೂ ಯೂಸೂಫ್ ಷರೀಫ್ ನಡುವೆ, ಕೋಲಾರದಲ್ಲಿ ಅನಿಲ್​ಕುಮಾರ್ ಹಾಗೂ ಬ್ಯಾಲಹಳ್ಳಿ ಗೋವಿಂದೇಗೌಡ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಯೂಸೂಫ್ ಹಾಗೂ ಅನಿಲ್​ಗೆ ಮಣೆ ಹಾಕಲಾಗಿದೆ. ಬೀದರ್​ನಲ್ಲಿ ವಿಜಯಸಿಂಗ್ ಮೇಲೆ ಒತ್ತಡ ತರುವ ಕಾರ್ಯ ಮುಂದುವರಿದಿತ್ತು. ಅಂತಿಮವಾಗಿ ಭೀಮರಾವ್ ಬಿ.ಪಾಟೀಲ್​ಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ದ್ವಿಸದಸ್ಯ ಕ್ಷೇತ್ರದಲ್ಲಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ. ಚಿಕ್ಕಮಗಳೂರಿನಿಂದ ಟಿಕೆಟ್ ಪಡೆದಿರುವ ಗಾಯತ್ರಿ ಶಾಂತೇಗೌಡ ಮೇಲ್ಮನೆಗೆ ಸ್ಪರ್ಧಿಸುತ್ತಿರುವ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ತಂದೆ ಬಿಜೆಪಿ ಮಗ ಅಭ್ಯರ್ಥಿ: ಕೊಡಗು ಜಿಲ್ಲೆಯಿಂದ ಅಭ್ಯರ್ಥಿ ಆಗಿರುವ ಡಾ.ಮಂಥರ್​ಗೌಡ ತಂದೆ ಎ.ಮಂಜು ಬಿಜೆಪಿಯಿಂದ ಹಾಸನ ಲೋಕಸಭಾ ಅಭ್ಯರ್ಥಿಯಾಗಿದ್ದರು. ಹಾಸನ ಜಿಪಂ ಸದಸ್ಯರಾಗಿದ್ದ ಮಂಥರ್​ಗೆ ಕೊಡಗಿನಿಂದ ಟಿಕೆಟ್ ನೀಡಲಾಗಿದೆ.

ಕೃಷ್ಣ ಶಿಫಾರಸಿಗೂ ಮನ್ನಣೆ: ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ ಶಿಫಾರಸಿಗೂ ಕಾಂಗ್ರೆಸ್ ಮನ್ನಣೆ ನೀಡಿದೆ. ಅವರು ಸೂಚಿಸಿದ್ದ ಎಂ.ಜಿ.ಗೂಳಿಗೌಡಗೆ ಮಂಡ್ಯದಿಂದ ಟಿಕೆಟ್ ನೀಡಲಾಗಿದೆ. ಗೂಳಿಗೌಡ ಈ ಮೊದಲು ಸಹಕಾರ ಸಚಿವರ ವಿಶೇಷಾಧಿಕಾರಿಯಾಗಿದ್ದರು. ಸಲೀಂ ಅಹ್ಮದ್​ಗೆ ಧಾರವಾಡ, ಶಿವಮೊಗ್ಗ ಜಿಲ್ಲೆಯವರಾದ ಮಂಜುನಾಥ ಭಂಡಾರಿಗೆ ದ. ಕನ್ನಡದಿಂದ ಟಿಕೆಟ್ ನೀಡಲಾಗಿದೆ. ಅದೇ ರೀತಿ ಬೆಂಗಳೂರಿನ ಬಿ.ಸೋಮಶೇಖರ್​ಗೆ ಚಿತ್ರದುರ್ಗದಿಂದ ಟಿಕೆಟ್ ದೊರಕಿದೆ.

ರೆಬೆಲ್ ಆದರೆ ತಕ್ಷಣ ಸಸ್ಪೆಂಡ್: ಪರಿಷತ್ ಚುನಾವಣೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿಯೇ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸ ಲಾಗಿದೆ. ಎಲ್ಲೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆಗಿಳಿಯ ದಂತೆ ನೋಡಿಕೊಂಡಿದ್ದೇವೆ. ಯಾರಾದರೂ ಬಂಡಾಯವೆದ್ದರೆ ಪಕ್ಷದಿಂದ ಕೂಡಲೇ ಉಚ್ಚಾಟಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲಬುರಗಿಯಲ್ಲಿ ಎಚ್ಚರಿಸಿದರು.

ಸಂದೇಶ್-ಎಚ್​ಡಿಕೆ ಗೌಪ್ಯ ಮಾತುಕತೆ

ಮೈಸೂರು: ಮೈಸೂರು- ಚಾಮರಾಜನಗರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಾಳಯದಲ್ಲಿ ಸೋಮವಾರ ಕುತೂಹಲಕರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಜೆಡಿಎಸ್​ನಿಂದ ದೂರವಾಗಿದ್ದ ಎಂಎಲ್​ಸಿ ಸಂದೇಶ್ ನಾಗರಾಜ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಗರಕ್ಕೆ ಆಗಮಿಸಿದ್ದ ಎಚ್​ಡಿಕೆ, ಆಲನಹಳ್ಳಿ ಬಡಾವಣೆಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ಸಂದೇಶ್ ನಾಗರಾಜ್​ಗೆ ಜೆಡಿಎಸ್ ಬಾಗಿಲು ಮುಚ್ಚಿದೆ. ಅವರು ಪಕ್ಷ ಬಿಟ್ಟು ಮೂರು ವರ್ಷ ಕಳೆದಿವೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ. ನಾನೂ ಅವರನ್ನು ಸಂರ್ಪಸಲ್ಲ ಎಂದು ಹರಿಹಾಯ್ದರು. ಈ ಹೇಳಿಕೆ ಹೊರಬೀಳುತ್ತಿದ್ದಂತೆ, ಅತ್ತ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಸಂದೇಶ್ ಮತ್ತೆ ಜೆಡಿಎಸ್ ಬಾಗಿಲು ಬಡಿದಿದ್ದು, 3 ವರ್ಷಗಳ ಬಳಿಕ ಎಚ್​ಡಿಕೆ ಭೇಟಿಯಾದರು. ಜೆಡಿಎಸ್ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಮನೆಗೆ ಊಟಕ್ಕೆ ತೆರಳಿದ್ದ ಸಂದರ್ಭ ಎಚ್​ಡಿಕೆ ಮತ್ತು ಸಂದೇಶ್ ನಾಗರಾಜ್ ಎದುರುಬದುರಾದರು. ನಾಟಿಕೋಳಿ ಊಟ ಸವಿದ ಬಳಿಕ ಇಬ್ಬರೂ ಗೌಪ್ಯ ಮಾತುಕತೆ ನಡೆಸಿದರು. ಹಳೇ ತಪ್ಪು ಮರೆತು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿ ಎಂದು ನಾಗರಾಜ್ ಕೋರಿದ್ದಾರೆ. ಇದಕ್ಕೆ ಸ್ಪಂದಿಸದ ಎಚ್​ಡಿಕೆ, ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ಬಹಳ ಬೇಸರದಿಂದಲೇ ಹೊರಬಂದ ನಾಗರಾಜ್, ಸುದ್ದಿಗಾರರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಎಚ್​ಡಿಕೆ ಪ್ರತಿಕ್ರಿಯಿಸಿ, ರಾಜಕಾರಣ ಏನೇ ಇರಲಿ ಸಂದೇಶ್ ನಾಗರಾಜ್ ನನ್ನ ಸ್ನೇಹಿತರು. ಇವತ್ತು ಊಟಕ್ಕೆ ಬಂದಿದ್ದೆ, ಆ ವೇಳೆ ಅವರೂ ಬಂದಿದ್ದರು. ಇಬ್ಬರೂ ಮಾತನಾಡಿದ್ದೇವೆ. ಟಿಕೆಟ್ ಹಂಚಿಕೆ ಬಗ್ಗೆ ಕಾರ್ಯಕರ್ತರ ಜತೆ ಚರ್ಚೆ ಮಾಡುತ್ತೇನೆ ಎಂದು ನಿರ್ಗಮಿಸಿದರು.

ಹಾನಗಲ್​ನಲ್ಲಾದ ತಪ್ಪು ಮಾಡ್ಬೇಡಿ

ಬೆಂಗಳೂರು: ಹಅನಗಲ್ ಉಪಚುನಾವಣೆಯಲ್ಲಿ ಆದ ತಪು್ಪಗಳನ್ನು ತಿದ್ದಿಕೊಂಡು ಮೇಲ್ಮನೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲು ಎಲ್ಲ ಪ್ರಯತ್ನ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ತಾಕೀತು ಮಾಡಿದ್ದಾರೆ. ಬಿಜೆಪಿ 20 ಸ್ಥಾನಗಳಿಗೆ ಸ್ಪರ್ಧಿಸಿದೆ. ಅದರಲ್ಲಿ 15 ಸ್ಥಾನಗಳನ್ನು ಗೆಲ್ಲಲೇಬೇಕು. ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕಿದೆ. ಪಕ್ಷ ಹಾಗೂ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿರುವ ಕಾಂಗ್ರೆಸ್​ಗೆ ತಕ್ಕ ತಿರುಗೇಟು ನೀಡಬೇಕು ಎಂಬುದು ಸಿಎಂ ಉದ್ದೇಶವಾಗಿದೆ. ಅದಕ್ಕಾಗಿಯೇ ಪಕ್ಷದ ಶಾಸಕರು ಹಾಗೂ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬೊಮ್ಮಾಯಿ ಮುಂದಾಗಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಪಕ್ಷದ ಅಧ್ಯಕ್ಷರು ಮತ್ತು ಸಿಎಂ ಗೆಲ್ಲಿಸಿಕೊಂಡು ಬರಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಲ್ಲಿ ಗೆದ್ದರೆ ಸರ್ಕಾರದ ವಿರುದ್ಧ ಅಲೆ ಆರಂಭವಾಗಿದೆ ಎಂಬ ಅಪಪ್ರಚಾರ ಆರಂಭವಾಗುತ್ತದೆ. ಅಧಿವೇಶನದಲ್ಲಿಯೂ ಪ್ರತಿಪಕ್ಷಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಅದಕ್ಕೆಲ್ಲ ಅವಕಾಶ ನೀಡಬಾರದು ಎಂದು ಹೇಳಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಸುನೀಲಗೌಡರ ಕೈ ಹಿಡಿದ ಕಾಂಗ್ರೆಸ್

ವಿಜಯಪುರ: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಎಂಎಲ್​ಸಿ ಸುನೀಲಗೌಡ ಪಾಟೀಲರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೊಷಣೆ ಮಾಡಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್​ನಿಂದ ಹಿರಿಯ ನಾಯಕ ಎಸ್.ಆರ್. ಪಾಟೀಲ ಹಾಗೂ ಸುನೀಲಗೌಡ ಪಾಟೀಲ ಇಬ್ಬರನ್ನೂ ಕಣಕ್ಕಿಳಿಸುವ ನಿರೀಕ್ಷೆ ಇತ್ತು. ಆದರೆ ಅಂತಿಮ ಹಂತದಲ್ಲಿ ಸುನೀಲಗೌಡ ಪಾಟೀಲ ಹೆಸರನ್ನು ಕೈ ಹೈಕಮಾಂಡ್ ಅಂತಿಮಗೊಳಿಸಿದೆ. ಸುನೀಲಗೌಡ ಪಾಟೀಲ 1995 ರಿಂದ ಕಾಂಗ್ರೆಸ್​ನ ಸಕ್ರಿಯ ಸದಸ್ಯರಾಗಿದ್ದಾರೆ. 2018ರಲ್ಲಿ ನಡೆದ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಪರಿಷತ್ ಉಪ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಗೊಂಡಿದ್ದರು.

ಅವಿರೋಧ ಆಯ್ಕೆ ಸಾಧ್ಯತೆ: ಕಾಂಗ್ರೆಸ್​ನಿಂದ ಸುನೀಲಗೌಡ, ಬಿಜೆಪಿಯಿಂದ ಪಿ.ಎಚ್. ಪೂಜಾರ ಅವಿರೋಧ ಆಯ್ಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸದೆ ಬಿಜೆಪಿಗೆ ಬೆಂಬಲಿಸಿದೆ ಎನ್ನ ಲಾಗಿದೆ. ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ನಡೆದಿದೆ.

ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿದೆ. ನ.16ರಿಂದಲೂ ನಾಮಪತ್ರ ಸಲ್ಲಿಸಲು ಅವಕಾಶವಿದ್ದರೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಉಮೇದುವಾರಿಕೆ ಸಲ್ಲಿಸಿಲ್ಲ. ಟಿಕೆಟ್​ಗೆ ಪೈಪೋಟಿ ಇರುವ ಕಡೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಮವಾರ ಸಂಜೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಹಾಗಾಗಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿರಲಿದೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಂದು ಸಂಜೆ ಕ್ರಮಬದ್ಧವಾದ ನಾಮಪತ್ರಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಉಮೇದುವಾರಿಕೆ ಹಿಂಪಡೆಯಲು ನ.26ರವರೆಗೆ ಕಾಲಾವಕಾಶ ನೀಡಲಾಗಿದೆ. ಡಿ.10ರಂದು ಮತದಾನ ನಡೆಯಲಿದ್ದು, ಡಿ.14ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net