

ಸಂಗಮ ಮೇಕೆದಾಟು: ಬೆಂಗಳೂರಿಗೆ ಕಾವೇರಿ ನೀರು ಕೊಡಬಾರದು ಎಂದು ತಮಿಳುನಾಡಿನವರು ಖ್ಯಾತೆ ತೆಗೆದಿದ್ದಾರೆ, ಅವರಿಗೆ ನೀವು ಬೆಂಬಲ ನೀಡುತ್ತೀರಲ್ಲ ಇದು ಕನ್ನಡಿಗರಿಗೆ ಮಾಡುವ ದ್ರೋಹ ಅಲ್ಲವೇ ಕಾರಜೋಳ, ಬೊಮ್ಮಾಯಿ ಅವರೇ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಂಗಮದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಕೇಂದ್ರ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಯೋಜನೆ ಆರಂಭಿಸದೇ ವಿಳಂಬ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರಲ್ಲದೆ, ಬಿಜೆಪಿ ತನ್ನ ಶಕ್ತಿಯನ್ನು ತಮಿಳುನಾಡಿನಲ್ಲಿ ವಿಸ್ತಾರ ಮಾಡಲು ಕೇಂದ್ರ ಸರ್ಕಾರ ನಿರಾಕ್ಷೇಪಣೆ ಪತ್ರ ಕೊಡುತ್ತಿಲ್ಲ. ಈ ದೋಷ ಮುಚ್ಚಿ ಹಾಕಲು ಮೇಕೆದಾಟು ಪಾದಯಾತ್ರೆ ಆಗಬಾರದೆಂದು ಶತಃಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಜನರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ದೂರಿದರು.
ಮಾತೆತ್ತಿದರೆ ಡಬಲ್ ಇಂಜಿನ ಸರ್ಕಾರ ಅಂತಾರೆ. ಎರಡೂವರೆ ವರ್ಷದಿಂದ ಡಬಲ್ ಇಂಜಿನ್ ಸರ್ಕಾರದಲ್ಲಿ ನಿರಾಕ್ಷೇಪಣಾ ಪತ್ರ ಪಡೆಯಲಿಲ್ಲ ಎಂದರೆ ನೀವು ಮಾಡಿದ್ದು ದ್ರೋಹ ಎಲ್ಲವೇ ಎಂದು ಪ್ರಶ್ನಿಸಿದರಲ್ಲದೆ ಪರಿಸರ ಅನುಮತಿ ಪಡೆಯಲು ಎರಡೂ ವರ್ಷ ಬೇಕಾ? ರಾಜ್ಯದಿಂದ ಇಪ್ಪತೆôದು ಎಂಪಿ ಇದ್ದಾರೆ, ಪ್ರಧಾನಿ ಮುಂದೆ ಕುಳಿತು ಕೇಳಲ್ಲ್ಲ ನಿಮಗೆ ಮಾನ ಮರ್ಯಾದೆ ಇಲ್ಲ ಎಂದು ಹರಿಹಾಯ್ದರು.
ಬೇಡ ಜೈಕಾರ: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಪರವಾಗಿ ಅವರ ಅಭಿಮಾನಿಗಳು ಪೈಪೋಟಿ ಮೇಲೆ ಜೈಕಾರ ಹಾಕುವುದು ಇತ್ತೀಚೆಗೆ ಸಾಮಾನ್ಯ. ಆದರೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ನಾಯಕರಿಗೆ ಜೈಕಾರ ಹಾಕುವುದು ಕಾಣಿಸಲಿಲ್ಲ. ಇದಕ್ಕೆ ಕಾರಣ, ಸಭೆಯ ಆರಂಭದಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಯಾರಿಗೂ ಜೈಕಾರ ಹಾಕದಂತೆ ಫರ್ವನು ಹೊರಡಿಸಿದ್ದರು. ಜತೆಗೆ ನಾಯಕರ ಜತೆ ದಂಡು ದಂಡಾಗಿ ಹೋಗಬೇಡಿ ಎಂದು ತಾಕೀತು ಮಾಡಿದರು.
ಪೊಲೀಸರ ಕಣ್ಗಾವಲು: ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತಾದರೂ ಎಲ್ಲೂ ಪೊಲೀಸರು ಪಾದಯಾತ್ರಿಗಳೊಂದಿಗೆ ಸಂಘರ್ಷಕ್ಕೆ ಇಳಿಯಲಿಲ್ಲ. ಆದರೆ ಹಲವು ಪೊಲೀಸರು, ಇಲಾಖೆ ನೀಡಿದ ಕ್ಯಾಮೆರಾಗಳಲ್ಲಿ, ಇಲ್ಲ ತಮ್ಮದೇ ಮೊಬೈಲ್ಗಳಲ್ಲಿ ಪಾದಯಾತ್ರೆಯ ಪ್ರತಿ ಕ್ಷಣದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಅಲ್ಲದೆ, ಕ್ಷಣ ಕ್ಷಣಕ್ಕೂ ಹಿರಿಯ ಅಧಿಕಾರಿಗಳಿಂದ ಪೊಲೀಸ್ ಸಿಬ್ಬಂದಿಗೆ ಯಾವೆಲ್ಲಾ ದೃಶ್ಯಗಳನ್ನು ಸೆರೆ ಹಿಡಿಯಬೇಕು ಎನ್ನುವ ಸೂಚನೆಗಳು ವಾಕಿಟಾಕಿ ಮೂಲಕ ರವಾನೆ ಆಗುತ್ತಿತ್ತು.
ಸಾಧನೆ ತನಕ ಹೋರಾಟ ಇರಲಿ: ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಯೋಜನೆಗೆ ಇಡೀ ರಾಜ್ಯ ಬೆಂಬಲ ಕೊಡುತ್ತದೆ. ಸಾಧನೆ ಆಗುವವರೆಗೂ ನಮ್ಮ ಹೋರಾಟ ಇರಬೇಕು, ನಮಗೆ ಛಲ ಇರಬೇಕು. ಕೆಪಿಸಿಸಿ ಅಧ್ಯಕ್ಷರು, ಸಿಎಲ್ಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಈ ಛಲ ಇದೆ. ಈ ಕೆಲಸ ಸಾಧ್ಯ ಆಗುತ್ತದೆ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನು ಹುರಿದುಂಬಿಸಿದರು. ಕೋವಿಡ್ ಸಂದರ್ಭದಲ್ಲಿ ನಮ್ಮ ವಿರುದ್ಧ ಏನೂ ಹೇಳುವಂತಾಗಬಾರದು, ಆ ರೀತಿ ಎಚ್ಚರಿಕೆ ವಹಿಸಬೇಕೆಂದು ಕರೆಕೊಟ್ಟ ಅವರು ಪಾದಯಾತ್ರೆ ವಿಫಲಗೊಳಿಸಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತದೆ. ಡಿಕೆಶಿ, ಸಿದ್ದರಾಮಯ್ಯ, ಡಿ.ಕೆ.ಸುರೇಶ್ ಗೆ ಕ್ರೆಡಿಟ್ ಬರುತ್ತದೆ ಎಂದು ಎಲ್ಲ ಪಾರ್ಟಿ ಪ್ರಯತ್ನ ಮಾಡುತ್ತಿದೆ. ಸರ್ಕಾರ, ಜೆಡಿಎಸ್ ಅಲ್ಲದೇ ಬೇರೆ ಬೇರೆಯವರು ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ, ಎಚ್ಚರ ವಹಿಸಬೇಕು ಎಂದರು.
ಕಾವೇರಿಗೆ ಡಿಕೆಶಿ ಪೂಜೆ: ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮೂಲಕ ನಿರ್ವಿಘ್ನ ಪಾದಯಾತ್ರೆಗೆ ಪ್ರಾರ್ಥಿಸಿದರು. ಇದೇ ವೇಳೆ ಪೂಜೆ ಸಲ್ಲಿಸುವ ವೇಳೆ ಡಿಕೆಶಿ ಆಯತಪ್ಪಿ ಬಿದ್ದ ವಿಡಿಯೋ ಭಾರಿ ಟ್ರೋಲ್ ಆಯಿತು. ಅಲ್ಲದೆ ಬನಿಯನ್ ಉಲ್ಟಾ ತೊಟ್ಟಿದ್ದೂ ಸಹ ಟ್ರೋಲ್ ಆಗಿದ್ದು ವಿಶೇಷ.
ಯಾತ್ರೆಗೆ ಜಾನಪದ ಸ್ಪರ್ಶ: ವೇದಿಕೆ ಎಡಬದಿಯಲ್ಲಿ ಸೇರಿದ್ದ ವಿವಿಧ ಕಲಾವಿದ ತಂಡಗಳು ಕಾರ್ಯಕ್ರಮಕ್ಕೆ ಕಳೆಗಟ್ಟಿದವು. ತಮಟೆ, ವೀರಗಾಸೆ, ಪಟ ಕುಣಿತ, ಡೊಳ್ಳು, ಯಕ್ಷಗಾನ, ತೊಗಲುಗೊಂಬೆ ತಂಡಗಳು ಪಾದಯಾತ್ರೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿದವು. ಯಾತ್ರೆಯುದ್ದಕ್ಕೂ ಈ ತಂಡಗಳು ಸಾಗಿಬಂದು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದವು. ದೊಡ್ಡಆಲಹಳ್ಳಿ ಸಮೀಪ ಪಾದಯಾತ್ರೆ ಆಗಮಿಸುತ್ತಿದ್ದಂತೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಖಾನಾಪುರ ಶಾಸಕಿ ಅಂಜಲಿ ಲಿಂಬಾಳ್ಕರ್ ಮಹಿಳಾ ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಮಾಜಿ ಸಚಿವೆ ಉಮಾಶ್ರೀ ಡೊಳ್ಳುಬಾರಿಸಿದರು.
ಸಾಧುಕೋಕಿಲಾ ಕಿಕ್ ಸ್ಟಾರ್ಟ್: ನಟ ಸಾಧುಕೋಕಿಲಾ, ಪಿಚ್ಚಳ್ಳಿ ಶ್ರೀನಿವಾಸ್ ತಂಡದ ನಾಡಗೀತೆ, ರೈತ ಗೀತೆ ಪ್ರಸ್ತುತಪಡಿಸಿ ಕಾರ್ಯಕ್ರಮದ ಉಮೇದನ್ನು ಹೆಚ್ಚಿಸಿತು. ರೈತ ಗೀತೆ ಹಾಡುವಾಗ ಹಸಿರು ಶಾಲು ತಿರುಗಿಸಿ ಕೈ ನಾಯಕರು, ಕಾರ್ಯಕರ್ತರು ದನಿಗೂಡಿಸಿ ಸಂಭ್ರಮಿಸಿದರು. ಸಾಧುಕೋಕಿಲಾ ತಂಡವು ಮೇಕೆದಾಟು- ಕಾವೇರಿ ಗೀತೆಯನ್ನು ವಿಶೇಷವಾಗಿ ಪ್ತಸ್ತುತಪಡಿಸಿ ಗಮನ ಸೆಳೆಯಿತು. ಹೆಜ್ಜೆ ಹಾಕುತೇವೆ ಹೆಜ್ಜೆ .. ಹೆಜ್ಜೆ... ಕಾವೇರಿಗಾಗಿ ಹೆಜ್ಜೆ ಹಾಡು ಕಾರ್ಯಕ್ರಮದ ಉದ್ಘಾಟನೆಗೆ ಮುನ್ನವೇ ಹುರುಪು ತುಂಬಿತು.
ಯೋಜನೆಯ ಸಮಗ್ರ ಯೋಜನಾ ವರದಿ ಸಲ್ಲಿಕೆಯಾಗಿದೆ. ಆಕ್ಷೇಪಣಾ ಅರ್ಜಿಗೆ ನ್ಯಾಯಾಲಯದಲ್ಲಿ ತಡೆ ಸಿಕ್ಕಿಲ್ಲ. ಇದು ವಾಸ್ತವ ಸಂಗತಿ. ಪರಿಸರ ನಿರಾಕ್ಷೇಪಣಾ ಪತ್ರ, ಕಾವೇರಿ ಮಂಡಳಿ ಅನುಮತಿ ಬೇಕಾಗಿದೆ. ಆದರೂ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ. | ಎಂ.ಬಿ.ಪಾಟೀಲ್ ಮಾಜಿ ಸಚಿವ ಈ ಹೋರಾಟ ಅಧಿಕಾರಕ್ಕಾಗಿ ಅಲ್ಲ್ಲ ಬಡ ಜನರ ಅಭಿವೃದ್ಧಿಗಾಗಿ. ಕಾಂಗ್ರೆಸ್ ಅಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿತ್ತು. ಇಂದು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿದೆ. ಪಾದಯಾತ್ರೆ ಬಗ್ಗೆ ಟೀಕೆ ಮಾಡುತ್ತೀರಾ? ನಿಮ್ಮ ಟೀಕೆ, ಅಡಚಣೆಗೆ ನಾವು ಹೆದರಲ್ಲ, ಸೊಪ್ಪು ಹಾಕಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ನಾನು ಮನೆಯಲ್ಲಿ ಮಲಗಲ್ಲ: ಮೊದಲ ದಿನದ ಪಾದಯಾತ್ರೆ ರಾತ್ರಿ 9.30ರ ಸುಮಾರಿಗೆ ಕೊನೆಗೊಂಡಿತು. ಡಿಕೆಶಿ ಸ್ವಗ್ರಾಮ ದೊಡ್ಡಾಲಹಳ್ಳಿಗೆ ಯಾತ್ರೆ ಪ್ರವೇಶ ಆಗುತ್ತಿದ್ದಂತೆ ಅದ್ದೂರಿ ಸ್ವಾಗತ ದೊರೆಯಿತು. ಈ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಡಿಕೆಶಿ, ನಾನು ಇಲ್ಲೇ ಸ್ಕೂಲ್ ರೂಮಲ್ಲಿ ಮಲಗುತ್ತೇನೆ. ನಾನು ಮನೆಯಲ್ಲಿ ಮಲಗೋಕೆ ಹೋರಾಟ ಮಾಡ್ತಾ ಇಲ್ಲ ಎಂದರು. ಬೊಮ್ಮಾಯಿ ಅವರೇ, ನೀವು ಹಾಲು ಕುಡಿಯಬೇಕು. ನಮ್ಮನ್ನು ಮತ್ತೆ ಜೈಲಲ್ಲಿ ನೋಡಬೇಕು ಅಂತ ನಿಮಗೆ ಆಸೆ ಇದೆ. ನೀವು ಹಾಲು ಕುಡಿಯಿರಿ, ನಿಮ್ಮ ಹೊಟ್ಟೆ ತಣ್ಣಗಾಗಬೇಕು ಎಂದರು.
ಹಾಸನ: ಕೋವಿಡ್ ನಿಯಂತ್ರಣ ಕ್ರಮಗಳ ಹಿನ್ನೆಲೆಯಲ್ಲಿ ಜ.19ರವರೆಗೆ ಕೆಎಸ್ಆರ್ಟಿಸಿ ಬಸ್ಗಳನ್ನು ಬಾಡಿಗೆಗೆ ನೀಡದಂತೆ ಸರ್ಕಾರ ನೀಡಿರುವ ಕಟ್ಟುನಿಟ್ಟಿನ ಸೂಚನೆಯಿಂದ ರಾಜ್ಯದ ಮೂಲೆ ಮೂಲೆಗಳಿಂದ ಮೇಕೆದಾಟು ಪಾದಯಾತ್ರೆಗೆ ಕಾರ್ಯಕರ್ತರನ್ನು ಕರೆತರುವ ಕಾಂಗ್ರೆಸ್ ಯತ್ನಕ್ಕೆ ಅಡಚಣೆ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಸಂರ್ಪಸಿದಾಗ 19ರವರೆಗೆ ಬಸ್ಗಳನ್ನು ಬಾಡಿಗೆಗೆ ನೀಡದಂತೆ ನಿಗಮದ ಕೇಂದ್ರ ಕಚೇರಿಯಿಂದ ನಿರ್ದೇಶನ ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ನಿಯಮ ಗಾಳಿಗೆ: ಸಾಮಾಜಿಕ ಅಂತರ ಕಾಯ್ದುಕೊಳ್ಳು ತ್ತೇವೆ ಎನ್ನುವ ಮಾತುಗಳನ್ನು ಆಡುತ್ತಲೇ ಪಾದಯಾತ್ರೆಗೆ ಚಾಲನೆ ನೀಡಿದ ನಾಯಕರ ಮಾತು ಕಾರ್ಯಕರ್ತರನ್ನು ತಲುಪಲೇ ಇಲ್ಲ. ವೇದಿಕೆಯಲ್ಲಿ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎನ್ನುವ ಸೂಚನೆಯನ್ನು ನೀಡುತ್ತಲೇ ಇದ್ದರು. ಆದರೆ ಯಾರಿಗೂ ಇದರ ಪರಿವೇ ಇರಲಿಲ್ಲ. ಪಾದಯಾತ್ರೆಗೆ ಬಂದವರಿಗೆ ನಮ್ಮ ನೀರು- ನಮ್ಮ ಹಕ್ಕು ಎಂದು ಮುದ್ರಿತವಾದ ನೀಲಿ ಹಾಗೂ ಬಿಳಿ ಬಣ್ಣದ ಟಿ-ಶರ್ಟ್ಗಳು, ಕೆಲವರಿಗೆ ಪಂಚೆ, ಶಲ್ಯ, ಟೋಪಿ ಹಾಗೂ ಮಾಸ್ಕ್ಗಳನ್ನು ಧ್ವಜ, ಟೋಪಿ, ಮಾಸ್ಕ್ಗಳೊಂದಿಗೆ ಕೈಗೆ ಬ್ಯಾಡ್ಜ್ಗಳನ್ನು ವಿತರಿಸಲು ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ನೂರಾರು ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.
ಹೆಚ್ಚಿದ ಜನಾಕ್ರೋಶ: ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್, ತಟಸ್ಥ ಧೋರಣೆ ತಳೆದ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶದ ಕಟ್ಟೆಯೊಡೆದಿದೆ. ನಿರ್ಬಂಧ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ, ವಾಹನ ಜಪ್ತಿ ಮಾಡಲಾಗುತ್ತಿದೆ. ಆದರೆ ನೇರ ನಿಯಮಗಳಿಗೆ ಸಡ್ಡು ಹೊಡೆದ ಕಾಂಗ್ರೆಸ್ ವಿರುದ್ಧ ಮೌನವಹಿಸಿದೆ. ಜನ-ಸಾಮಾನ್ಯರಿಗೊಂದು, ರಾಜಕೀಯ ನಾಯಕರಿಗೊಂದು ಕಾನೂನೆ? ಎಂದು ಸಿಟ್ಟಿಗೆದ್ದ ಜನರು ಪ್ರಶ್ನಿಸಿದ್ದು, ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಬೈಕ್, ಬಸ್ಗಳಲ್ಲಿ ಬಂದ ಬೆಂಬಲಿಗರು: ಪಾದಯಾತ್ರೆಗೆ ಸಾವಿರಾರು ಯುವಕರು ಬೈಕ್ನಲ್ಲಿ ಬಂದಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಕನಕಪುರದವರೇ ಆಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇವರ ಬೈಕ್ಗಳಿಗೆ 300 ರೂ. ಪೆಟ್ರೋಲ್ ಹಾಕಿಸಲಾಗುತ್ತಿತ್ತು ಎನ್ನಲಾಗಿದೆ. ರಾಮನಗರ ಜಿಲ್ಲೆ ಸೇರಿ ಪಕ್ಕದ ಮಂಡ್ಯ, ಮಳವಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ದೂರದ ಊರುಗಳಿಂದ ಸುಮಾರು 100 ಬಸ್ಗಳಲ್ಲಿ ಜನರು ಬಂದು ಪಾದಯಾತ್ರೆಗೆ ಬೆಂಬಲ ಸೂಚಿಸಿದರು. ಬೆಳಗ್ಗಿನ ಉಪಹಾರಕ್ಕೆ ಸಂಗಮದಲ್ಲಿ ಚೌಚೌ ಬಾತ್, ಪಲಾವ್, ಚಟ್ನಿ, ಮೊಸರು ಬಜ್ಜಿ ತಯಾರಿಸಲಾಗಿತ್ತು. ಮಧ್ಯಾಹ್ನ ಹೆಗ್ಗನೂರಿನಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ರಾಗಿ ಮುದ್ದೆ, ಅವರೆಕಾಳು ಸಾರು, ರೈಸ್ ಬಾತ್, ಮದ್ದೂರು ವಡೆ, ಮೈಸೂರು ಪಾಕ್, ಹಪ್ಪಳ, ಉಪ್ಪಿನಕಾಯಿ ಬಡಿಸಲಾಯಿತು.
ವಾಣಿಜ್ಯ ಮಂಡಳಿ ನಿರ್ಧಾರಕ್ಕೆ ವಿರೋಧ: ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವುದಕ್ಕೆ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ಪ್ರಶಾಂತ ಸಂಬರಗಿ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಈಗಿನ ಹೋರಾಟಕ್ಕೆ ಕರೆ ನೀಡಿರುವುದು ಮುಂಚೂಣಿಯಲ್ಲಿರುವ ಪಕ್ಷದವರು. ವಾಣಿಜ್ಯ ಮಂಡಳಿ ಒಂದು ಪಕ್ಷವನ್ನು ಬೆಂಬಲಿಸಿ ಪ್ರಚಾರ ಕೊಟ್ಟಿರುವುದು ಸರಿಯಲ್ಲ. ನೆಲ, ಜಲ ಕುರಿತಾಗಿ ಚಿತ್ರರಂಗ ಯಾವಾಗಲೂ ಹೋರಾಟ ನಡೆಸುತ್ತಲೇ ಬಂದಿದೆ. ಮೇಕೆದಾಟು ವಿಚಾರವಾಗಿ ಸಮಂಜಸ ಎನಿಸಿದರೆ, ಚಿತ್ರರಂಗದವರೆಲ್ಲ ಸೇರಿ ನಿರ್ಧರಿಸೋಣ. ಈ ಪಾದಯಾತ್ರೆಗೆ ಚಿತ್ರರಂಗದ ಯಾರೆಲ್ಲರ ಒಪ್ಪಿಗೆ ಪಡೆದಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.