

ಕೊಡಗು ವಿಧಾನ ಪರಿಷತ್ ಕ್ಷೇತ್ರ
| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಮತದಾರರ ಸಂಖ್ಯೆ ಹೆಚ್ಚಿರುವುದು ಹಾಗೂ ಪಕ್ಷದ ಬಲಿಷ್ಠ ಸಂಘಟನೆಯಿಂದಾಗಿ ಗೆಲುವು ನಮ್ಮದೆಂದು ಕಮಲಪಡೆ ಬೀಗುತ್ತಿದೆ. ಅಚ್ಚರಿ ಫಲಿತಾಂಶದ ನಿರೀಕ್ಷೆಯೊಂದಿಗೆ ಬದಲಾವಣೆಗಾಗಿ ಮತದಾರರು ನಮ್ಮ ಕೈಹಿಡಿಯಲಿದ್ದಾರೆ ಎಂದು ಕಾಂಗ್ರೆಸ್ಸಿಗರು ಕನಸು ಕಾಣುತ್ತಿದ್ದಾರೆ.
ಬಿಜೆಪಿ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ (ಬಿಜೆಪಿ) ಹಾಗೂ ಹಾಸನ ಜಿಲ್ಲೆಯ ರಾಮನಾಥಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಡಾ. ಮಂಥರ್ಗೌಡ (ಕಾಂಗ್ರೆಸ್) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ್ದ ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಚ್.ಯು.ಇಸಾಕ್ ಖಾನ್ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದು ನಮ್ಮ ಪ್ರಥಮ ಜಯ ಎಂದು ಕಾಂಗ್ರೆಸ್ ಬೀಗುತ್ತಿದೆ.
ಸುಜಾ ಕುಶಾಲಪ್ಪ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪರಿಷತ್ ಕೊಡಗು ಕ್ಷೇತ್ರದ ಹಾಲಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಹೋದರ. ಆ ಕಾರಣ ಕ್ಕಾಗಿಯೇ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಆರೋಪಿಸುತ್ತಿದೆ. ಕೊಡಗಿನಲ್ಲಿ ಮಂಡೇಪಂಡ ಸಹೋದರರಿಗೆ ಮಾತ್ರ ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಬಿರುಸಿನ ಪ್ರಚಾರ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಕಮಲೆ ಪಡೆ ಹೋಗಿಲ್ಲ.
ಬಿಜೆಪಿ ಮುಖಂಡ, ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ. ಮಂಜು ಪುತ್ರರಾಗಿರುವ ಡಾ.ಮಂಥರ್ಗೌಡ ಕೊಡಗಿನಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಹೊರಗಿನ ಅಭ್ಯರ್ಥಿ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಎದುರಿಸುವ ಧೈರ್ಯ ಇಲ್ಲ. ಅದಕ್ಕಾಗಿ ಅಮದು ಅಭ್ಯರ್ಥಿಗೆ ಮಣೆ ಹಾಕಿದೆ ಎಂದು ಎಲ್ಲೆಡೆ ಪ್ರಚಾರ ನಡೆಸುತ್ತಿದೆ. ಕೊಡಗಿನಲ್ಲಿ ನನಗೆ ಪಿತ್ರಾರ್ಜಿತ ಆಸ್ತಿ ಇದೆ. ನನ್ನ ಅಜ್ಜಿ, ಪತ್ನಿ ಕೊಡವ ಜನಾಂಗಕ್ಕೆ ಸೇರಿದವರು ಎಂದು ಡಾ.ಮಂಥರ್ಗೌಡ ಪ್ರತ್ಯುತ್ತರ ನೀಡುತ್ತಿದ್ದಾರೆ. ಚುನಾವಣೆ ಎದುರಿಸುವ ಆರ್ಥಿಕ ಶಕ್ತಿ ನಮ್ಮ ಬಳಿ ಇಲ್ಲ. ಹೈಕಮಾಂಡ್ ಸಮರ್ಥ ಅಭ್ಯರ್ಥಿಗೆ ಅವಕಾಶ ನೀಡಿದ್ದು, ಪಕ್ಷ ಚೇತರಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದು ಜಿಲ್ಲಾ ಕೈ ನಾಯಕರ ವಾದ.
ಲೆಕ್ಕಾಚಾರ ಉಲ್ಟಾ ನಿರೀಕ್ಷೆ: ಹಿಂದಿನ ಚುನಾವಣೆ ಗಳಲ್ಲಿ ಬಂದಿರುವ ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಗೆಲುವಿನ ಅಂತರ ಹೆಚ್ಚು ಮಾಡಲು ಬಿಜೆಪಿ ಹೆಚ್ಚಿನ ಒತ್ತು ನೀಡಿದೆ. 2 ಕಡೆಯವರೂ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಲೆಕ್ಕಾಚಾರ ಬುಡಮೇಲು ಆಗುವ ನಿರೀಕ್ಷೆಯೂ ಇದೆ.
ಪುತ್ರನ ಪರ ಮಂಜು ಬ್ಯಾಟಿಂಗ್: ಹೊರಗಿನ ಅಭ್ಯರ್ಥಿಗೆ ಅವಕಾಶ ನೀಡಿರುವುದಕ್ಕೆ ಕೊಡಗು ಕಾಂಗ್ರೆಸ್ಸಿಗೆ ಅಪಮಾನ ಎಂದು ಹೇಳುತ್ತಿದ್ದ ಕಾಂಗ್ರೆಸ್ ಘಟಾನುಘಟಿ ನಾಯಕರು, ಸದ್ದಿಲ್ಲದೇ ಅಭ್ಯರ್ಥಿಯೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ತಾಂತ್ರಿಕವಾಗಿ ಇಂದಿಗೂ ಬಿಜೆಪಿಯಲ್ಲಿರುವ ಎ.ಮಂಜು ತನ್ನ ಪುತ್ರನ ಪರ ಕೊಡಗಿನಲ್ಲಿ ಭರ್ಜರಿ ಕೆಲಸ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ
| ಪಿ.ಬಿ.ಹರೀಶ್ ರೈ ಮಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ದ.ಕ. ದ್ವಿಸದಸ್ಯ ವಿಧಾನಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಹಾದಿ ಸಲೀಸಾಗಿದೆ. ಕಣದಲ್ಲಿರುವ ಎಸ್ಡಿಪಿಐ ಅಭ್ಯರ್ಥಿ ಫಲಿತಾಂಶದ ಮೇಲೆ ಪರಿಣಾಮ ಬೀರá-ವ ಸಾಧ್ಯತೆ ಕಡಿಮೆ.
ಆರಂಭದಲ್ಲಿ ಸಹಕಾರಿ ರಂಗದ ನಾಯಕ ಡಾ.ಎಂ.ಎನ್. ರಾಜೇಂದ್ರಕುಮಾರ್ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೊಷಿಸಿದ ಕಾರಣ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಕೊನೇ ಕ್ಷಣದಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಫಲಿತಾಂಶದ ಬಗ್ಗೆ ಕುತೂಹಲ ಉಳಿದಿಲ್ಲ. ಬಿಜೆಪಿಯಿಂದ ಹಾಲಿ ಸದಸ್ಯ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿ. ಸತತ ನಾಲ್ಕನೇ ಬಾರಿ ಪರಿಷತ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟು 6040 ಮತಗಳ ಪೈಕಿ ಬಿಜೆಪಿ ಸುಮಾರು 3700 ಮತ ಹೊಂದಿದ್ದು, ಹಾಗಾಗಿ ಕೋಟ ದಾರಿ ಸುಗಮ.
ಪಕ್ಷಗಳಿಗೆ ಮತ ಒಡೆಯುವ ಭೀತಿ: ಗೆಲುವು ಖಚಿತವಾದರೂ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ಮತ ಒಡೆಯುವ ಭೀತಿ ಇದೆ. ಬಿಜೆಪಿ ಗೆಲುವಿಗೆ ಅಗತ್ಯಕ್ಕಿಂತ ಹೆಚ್ಚು ಮತ ಇರುವ ಕಾರಣ ಕಾಂಗ್ರೆಸ್ನಿಂದ ಬಿಜೆಪಿ ಸದಸ್ಯರ ಮತ ಸೆಳೆಯುವ ಪ್ರಯತ್ನ ನಡೆದಿದೆ. ಇನ್ನೊಂದೆಡೆ ಕಾಂಗ್ರೆಸ್ನಲ್ಲಿರುವ ಅಲ್ಪಸಂಖ್ಯಾತ ಸದಸ್ಯರ ಮತವನ್ನು ಎಸ್ಡಿಪಿಐ ಸೆಳೆಯುವ ಸಾಧ್ಯತೆ ಇದೆ. ಹಾಗಾಗಿ ಮತಗಳು ಒಡೆಯ ದಂತೆ ಕಟ್ಟೆಚ್ಚರ ವಹಿಸುವುದು ಉಭಯ ಪಕ್ಷಗಳಿಗೆ ಅನಿವಾರ್ಯ. ಹೀಗಾಗಿ ಪ್ರಥಮ ಪ್ರಾಶಸ್ಱದ ಮತ ಚಲಾಯಿಸುವಂತೆ ಸೂಚನೆ ನೀಡಿವೆ.
ಉಪ ಚುನಾವಣೆ ಗೆದ್ದಿದ್ದ ಪೂಜಾರಿ: 2003ರ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಗೆದ್ದಿತ್ತು. ಪ್ರತಾಪಚಂದ್ರ ಶೆಟ್ಟಿ ಮತ್ತು ಬ್ಲೇಸಿಯಸ್ ಡಿಸೋಜ ಚುನಾಯಿತರಾಗಿದ್ದರು. ಈ ಪೈಕಿ ಬ್ಲೇಸಿಯಸ್ ಡಿಸೋಜ ಅಕಾಲಿಕ ಮರಣದಿಂದ 2008ರಲ್ಲಿ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಗೆ ಅಚ್ಚರಿಯ ಸೋಲುಣಿಸಿ ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಬಾರಿ ಮೇಲ್ಮನೆ ಪ್ರವೇಶಿಸಿದರು.