ಜೈಲುಗಳಲ್ಲಿ ಜಾಮರ್ ಇದ್ದರೂ ಮೊಬೈಲ್ ರಿಂಗಣ!

ವಿಜಯವಾಣಿ (6)
Published on

11 ಕೋಟಿ ರೂ. ಖರ್ಚು ವ್ಯರ್ಥ 7 ಕಾರಾಗೃಹಗಳಲ್ಲಿ ಫೋನ್ ಟಾಕ್​ಗಿಲ್ಲ ತಡೆ

| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು

ರಾಜ್ಯದ ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ, ಸಿಗ್ನಲ್ ಸಿಗದಂತೆ ಜಾಮರ್ ಅಳವಡಿಸುವುದಕ್ಕೆ ಕೋಟಿ ಕೋಟಿ ರೂ. ಖರ್ಚು ಮಾಡಿದರೂ ಫೋನ್​ಗಳು ರಿಂಗಣಿಸುವುದಕ್ಕೆ ಮಾತ್ರ ತಡೆ ಬಿದ್ದಿಲ್ಲ.! ಪರಪ್ಪನ ಅಗ್ರಹಾರ ಸೇರಿ 7 ಜೈಲುಗಳಿಗೆ ‘ಟವರ್ಸ್ ಆಫ್ ದಿ ಹಮೋನೀಸ್ ಸೆಲ್ ಬ್ಲಾಕಿಂಗ್ ಸಿಸ್ಟಮ್ ಟೆಕ್ನಾಲಜಿ (ಟಿ-ಎಚ್​ಸಿಬಿಎಸ್) ಒಳಗೊಂಡ ಮೊಬೈಲ್ ಟವರ್ ಅಳವಡಿಸಲಾಗಿದೆ. ಜತೆಗೆ 5 ವರ್ಷದ ನಿರ್ವಹಣೆಗೆ 11.32 ಕೋಟಿ ರೂ. ಬಿಡುಗಡೆಯಾಗಿದೆ. ಟಿ-ಎಚ್​ಸಿಬಿಎಸ್ ಟವರ್​ಗಳು ನಿಗದಿತ ವ್ಯಾಪಿಯಲ್ಲಿ ಮೊಬೈಲ್​ಗೆ ಸಿಗ್ನಲ್​ಗಳು ದೊರೆಯದಂತೆ ಕೆಲಸ ಮಾಡುತ್ತವೆ.

ಇವುಗಳ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಭಯೋತ್ಪಾದಕ ಚಟುವಟಿಕೆ, ಸಮಾಜಘಾತುಕ ಕೃತ್ಯ, ಕೊಲೆ ಪ್ರಕರಣಗಳಂತಹ ಗಂಭೀರ ಕೇಸಿನಲ್ಲಿ ನ್ಯಾಯಾಂಗ ಬಂಧನ ಅಥವಾ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಸುಲಭವಾಗಿ ಸಿಗುತ್ತಿವೆ. ಕೆಲವರು ಜೈಲಿನಲ್ಲಿ ಕುಳಿತು ಹೊರಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡು ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರೆ, ಇನ್ನೂ ಕೆಲವರು ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ.

2.96 ಕೋಟಿ ರೂ. ಬಿಡುಗಡೆ: ಪರಪ್ಪನ ಅಗ್ರಹಾರ ಜೈಲಲ್ಲಿ ಮೂರು ಟಿ-ಎಚ್​ಸಿಬಿಸ್ ಮೊಬೈಲ್ ಟವರ್ ಅಳವಡಿಕೆ ಮತ್ತು 5 ವರ್ಷದ ನಿರ್ವಹಣೆಗಾಗಿ 4.67 ಕೋಟಿ ರೂ. ವೆಚ್ಚವಾಗುತ್ತಿದೆ. ಮೇ 2ರಂದು 2.96 ಕೋಟಿ ರೂ. ಬಿಡುಗಡೆಯಾಗಿದೆ. ನಟ ದರ್ಶನ್ ಮತ್ತು ರೌಡಿಗಳು ಮೊಬೈಲ್ ಬಳಕೆ ಮಾಡಿರುವ ಫೋಟೋ ಮತ್ತು ವಿಡಿಯೋ ಹೊರ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಯಿತು. ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಲಾಗಿದೆ.

11.32 ಕೋಟಿ ರೂ. ವೆಚ್ಚ: ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬಳ್ಳಾರಿ, ತುಮಕೂರು ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್​ಸಿಬಿಎಸ್ ಮೊಬೈಲ್ ಟವರ್ ಅಳವಡಿಕೆ ಮತ್ತು ನಿರ್ವಹಣೆ ಸಲುವಾಗಿ 11.32 ಕೋಟಿ ರೂ. ಮೀಸಲಿಡಲಾಗಿದೆ.

ಸೇವಾ ಪೂರೈಕೆದಾರರಿಗೆ ಆರ್​ಟಿಜಿಎಸ್ ಮೊತ್ತ

  • ರಿಲಿಯನ್ಸ್ ಜಿಯೋ ಇನ್​ಫೋಕಂ ಲಿ. 86,99,999 ರೂ.
  •  ಭಾರತೀ ಏರ್​ಟೆಲ್ ಲಿಮಿಟೆಡ್ 87 ರೂ. ಲಕ್ಷ ರೂ.
  • ವೋಡಾಫೋನ್ ಐಡಿಯ ಲಿಮಿಟೆಡ್ 57 ಲಕ್ಷ ರೂ.
  • ಮೂರು 30 ಕೆವಿಎ ಡೀಸಲ್ ಜನರೇಟರ್ ಖರೀದಿಗೆ 19 ಲಕ್ಷ ರೂ.

ಬೆಳಕಿಗೆ ಬಂದ ಪ್ರಕರಣಗಳು

  • ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಶಿವಮೊಗ್ಗ ಜೈಲಿನಲ್ಲಿರುವ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಸುಪಾರಿ ಕೊಟ್ಟಿದ್ದ.
  • ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗಪುರ ಕಚೇರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ನಟೋರಿಯಸ್ ಜಯೇಶ್ ಪೂಜಾರಿ ಕರೆ ಮಾಡಿ 10 ಕೋಟಿ ರೂ.ಗೆ ಬೇಡಿಕೆ ಒಡ್ಡಿದ್ದ.
  • ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಸೇವೆ ಡಿಐಜಿ ಟಿ.ಪಿ.ಶೇಷ ಅವರಿಗೆ ಪರಪ್ಪನ ಅಗ್ರಹಾರ, ಬೆಳಗಾವಿ ಹಿಂಡಲಗಾ ಸೆಂಟ್ರಲ್ ಜೈಲಿನಿಂದ ಕರೆ ಮಾಡಿ ವಸತಿಗೃಹ ಸ್ಪೋಟಿಸುವುದಾಗಿ ಬೆದರಿಕೆ.
  • ಪರಪ್ಪನ ಅಗ್ರಹಾರದಿಂದ ರೌಡಿ ಮನೋಜ್ ಎಂಬಾತ ಯುವತಿಗೆ ನಗ್ನ ವಿಡಿಯೋ ಕಳುಹಿಸಿ ಬ್ಲಾಕ್​ವೆುೕಲ್ ಮಾಡಿ 40 ಸಾವಿರ ರೂ. ವಸೂಲಿ ಮಾಡಿದ್ದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net