

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ ವಿಧಾನಸಭೆ, ಕರ್ನಾಟಕದ ಮೂರು ಸೇರಿ ವಿವಿಧ ರಾಜ್ಯಗಳ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದ್ದು, ಕುತೂಹಲ ಗರಿಗೆದರಿದೆ. ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಮಹಾರಾಷ್ಟ್ರ ಹಾಗೂ ಜಾರ್ಖಂಡ ಎರಡೂ ಕಡೆ ಎನ್ಡಿಎ ಮೈತ್ರಿಕೂಟಕ್ಕೆ ಜಯದ ಸಾಧ್ಯತೆ ಊಹಿಸಿವೆ ಯಾದರೂ, ಮತದಾರನ ಮನದಾಳ ಏನೆಂಬುದು ಬಯಲಾಗಬೇಕಿದೆ. ಬಹುತೇಕ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ನಿರೀಕ್ಷಿಸಲಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ವ್ಯಾಪಕ ಸ್ವರೂಪದ ಬದಲಾವಣೆಗಳಾಗಿದ್ದು, ಮಹಾಯುತಿ ಹಾಗೂ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ನಡುವಣ ಸೆಣಸಾಟದಲ್ಲಿ ವಿಜಯ ಮಾಲೆ ಯಾರಿಗೆಂದು ಕಾದುನೋಡಬೇಕಿದೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ (ಬಿಜೆಪಿ, ಶಿವಸೇನೆ(ಏಕನಾಥ ಶಿಂಧೆ ಬಣ) ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ತೀವ್ರ ಹಿನ್ನಡೆ ಕಂಡಿತ್ತು. ಜಾರ್ಖಂಡದಲ್ಲಿ ಜೆಎಂಎಂ ನೇತೃತ್ವದ, ಕಾಂಗ್ರೆಸ್ ಮತ್ತಿತರ ಪಕ್ಷಗಳ ಮೈತ್ರಿಕೂಟ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ನೇತೃತ್ವದ ಮೈತ್ರಿಕೂಟಗಳಿಗೆ ಇದು ಪ್ರತಿಷ್ಠೆಯ ಸಮರವಾಗಿದೆ. ಮಹಾರಾಷ್ಟ್ರದ ಎಲ್ಲ 288 ಸ್ಥಾನಗಳಿಗೆ ನ.20ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದರೆ, ಜಾರ್ಖಂಡದ 81 ಸೀಟುಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂತಾದವರು ವ್ಯಾಪಕವಾಗಿ ಪ್ರಚಾರ ನಡೆಸಿ ಕಣವನ್ನು ರಂಗೇರಿಸಿದ್ದರು. ಇದರ ಜೊತೆಗೆ, ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನ.13ರಂದು ಮತದಾನವಾಗಿದ್ದು, ಅಲ್ಲಿ ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ಕಣದಲ್ಲಿದ್ದಾರೆ. ಇದು ಅವರ ಚುನಾವಣಾ ರಾಜಕೀಯದ ಪ್ರವೇಶ ಆಗಿರುವುದರಿಂದ, ಗಮನಸೆಳೆದಿದೆ. ಉತ್ತರ ಪ್ರದೇಶದ 9, ಪಂಜಾಬ್ನ 4, ಕೇರಳ ಮತ್ತು ಉತ್ತರಾಖಂಡದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ನ.20ರಂದು ಮತದಾನ ನಡೆದಿದೆ.
ಶಾಸಕರ ಮೇಲೆ ನಿಗಾ: ಮತ ಎಣಿಕೆ ನಂತರ, ಸರ್ಕಾರ ರಚನೆಗೆ ಶಾಸಕರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ಮಹಾ ವಿಕಾಸ ಅಘಾಡಿಯಿಂದ ಆಯ್ಕೆಯಾಗುವ ಎಲ್ಲ ಶಾಸಕರನ್ನು ಒಂದೇ ಕಡೆ ಇರಿಸಲಾಗುವುದೆಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಕಾಂಗ್ರೆಸ್ನಿಂದ ವೀಕ್ಷಕರ ನೇಮಕ: ಫಲಿತಾಂಶ ನಂತರದ ಸನ್ನಿವೇಶಗಳ ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ ಹಾಗೂ ಜಾರ್ಖಂಡ ರಾಜ್ಯಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ. ಮಹಾರಾಷ್ಟ್ರಕ್ಕೆ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್ ಹಾಗೂ ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.