

ಹಾವೇರಿ: ಲಂಚ ಪಡೆಯುವಾಗ ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಎರಡು ಸಾವಿರ ರೂ. ಹಣವನ್ನು ಲಂಚವಾಗಿ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿರುವ ನಾಡಕಚೇರಿಯಲ್ಲಿ ಲೋಕಾ ಅಧಿಕಾರಿಗಳು ರೇಡ್ ನಡೆಸಿದ್ದಾರೆ.
ಉಪ ತಹಶೀಲ್ದಾರ್ ಸೋಮಪ್ಪ ನಾಯ್ಕರ್ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿರುವ ವ್ಯಕ್ತಿ. ರೈತರಿಗೆ ದಾಖಲೆ ಪತ್ರಗಳನ್ನು ಕೊಡುವುದಕ್ಕೆ ಐದು ಸಾವಿರ ರೂ. ಡಿಮ್ಯಾಂಡ್ ಇಟ್ಟಿದ್ದಾರೆ. ಅದರ ಅನ್ವಯ ಇಂದು ಮುಂಗಡವಾಗಿ ಎರಡು ಸಾವಿರ ರೂ. ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಾವೇರಿಯ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.
ಪ್ರತಿಯೊಂದು ಫೈಲ್ ಮುಂದೇ ಹೋಗಬೇಕು ಎಂದರೆ ಹಣ ಕೊಡಬೇಕು ಎಂದು ಡಿಮ್ಯಾಂಡ್ ಇಡುತ್ತಿದ್ದ ಸೋಮಪ್ಪ ವಿರುದ್ಧ ಇದೀಗ ಅಧಿಕಾರಿಗಳು ಬಂಧಿಸಿದ್ದಾರೆ. ದೂರು ಬಂದ ಹಿನ್ನಲೆ ಖಚಿತ ಮಾಹಿತಿ ಮೇರೆಗೆ ಟ್ರ್ಯಾಪ್ ಮಾಡಲಾಗಿದೆ. ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.