

ಸಾಗರ: ಊರನ್ನು ಸ್ವಚ್ಛವಾಗಿಡುವಲ್ಲಿ ಪೌರ ನೌಕರರ ಪಾತ್ರ ಹಿರಿದು. ರಾಜ್ಯದಲ್ಲಿ 500 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ಕೊಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಹಾಲಿ 700 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನಿಯೋಜನೆ ಮಾಡಿದ್ದು ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ವಿನೋಬಾ ನಗರದಲ್ಲಿ ಮಂಗಳವಾರ ವಾರ್ಡ್ ನಂ. 7 ಮತ್ತು 11ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾಗಿದ್ದ ಅಂಗನವಾಡಿ ನೂತನ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಜತೆಗೆ ಕ್ರಿಯಾಶೀಲ ಚಟುವಟಿಕೆಗಳಿಗೆ ಅಂಗನವಾಡಿ ಕೇಂದ್ರ ಅತಿ ಮುಖ್ಯವಾಗಿದೆ. ಹೀಗಾಗಿ ಹೊಸದಾಗಿ ಅಂಗನವಾಡಿ ನಿರ್ಮಾಣ ಮಾಡಲು ಸರ್ಕಾರ 20 ಲಕ್ಷ ರೂ. ಅನುದಾನ ನೀಡುತ್ತಿದೆ. ವಿನೋಬಾನಗರದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಅತ್ಯಂತ ಸುಂದರವಾಗಿದ್ದು ಇದೇ ಮಾದರಿಯನ್ನು ಇತರೆ ಕಡೆಗಳಲ್ಲಿ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಇನ್ನಿತರೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರ 1 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷಬೇಧ ಮಾಡದೆ ಎಲ್ಲ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಲಾಗುತ್ತದೆ. ಸಾಗರ ನಗರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷ ಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಭಾವನಾ ಸಂತೋಷ್, ಗಣಪತಿ ಮಂಡಗಳಲೆ, ಗಣೇಶ ಪ್ರಸಾದ್, ಪ್ರಮುಖರಾದ ಬಿ.ವಿ.ರವೀಂದ್ರನಾಥ್, ಗುರುರಾಜ್ ಇತರರಿದ್ದರು.