ಸಂಪಾದಕೀಯ | ಶಾಲೆಗಳ ದಯನೀಯ ಸ್ಥಿತಿ

Untitled design
Published on

ದೇಶದಾದ್ಯಂತ 2024-25ನೇ ಶೈಕ್ಷಣಿಕ ವರ್ಷದಲ್ಲಿ 7,993 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಅಂದರೆ ಯಾವುದೇ ವಿದ್ಯಾರ್ಥಿಗಳು ಪ್ರವೇಶವನ್ನೇ ಪಡೆದಿಲ್ಲ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ ಎರಡನೇ ಸ್ಥಾನದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಈ ಪ್ರಮಾಣದಲ್ಲಿ ಕುಸಿಯುತ್ತಿರುವುದು ಗಂಭೀರ ಸಂಗತಿ. ಮಾತ್ರವಲ್ಲ, 2024-25ರಲ್ಲಿ ದಾಖಲಾತಿಯೇ ಆಗದ 7,993 ಸರ್ಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರ ಸಂಖ್ಯೆ 20,817! ಒಬ್ಬರೇ ಶಿಕ್ಷಕರು ಇರುವ ಶಾಲೆಗಳ ಸಂಖ್ಯೆ 1 ಲಕ್ಷದಷ್ಟಿದ್ದು, ಇಲ್ಲಿ ಎಲ್ಲ ತರಗತಿ ಮಕ್ಕಳಿಗೂ ಒಬ್ಬರೇ ಶಿಕ್ಷಕ ಪಾಠ ಮಾಡಬೇಕು. ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಆಗಾಗ ಅನುದಾನ ನೀಡಿದರೂ, ಸಮಸ್ಯೆ ಬಗೆಹರಿದಿಲ್ಲ. ಶೌಚಗೃಹ, ಶುದ್ಧ ಕುಡಿಯುವ ನೀರು, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ ಸೇರಿದಂತೆ ಹಲವು ಕೊರತೆಗಳನ್ನು ಸಾವಿರಾರು ಶಾಲೆಗಳು ಎದುರಿಸುತ್ತಿವೆ. ಶೌಚಗೃಹ ಇಲ್ಲದ್ದರಿಂದಲೇ ಹಲವು ಹಳ್ಳಿಗಳಲ್ಲಿ ಬಾಲಕಿಯರು ಶಾಲೆ ತೊರೆದ ನಿದರ್ಶನಗಳಿಗೆ ಕೊರತೆ ಇಲ್ಲ.

ಶೈಕ್ಷಣಿಕ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳು ಇವೆ ಮತ್ತು ಸರ್ಕಾರಿ ಶಾಲೆಗಳು ಮಕ್ಕಳನ್ನು ಸೆಳೆಯಲು ವಿಫಲವಾಗುತ್ತಿವೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 36 ಸಾವಿರ ಕೊಠಡಿಗಳ ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು? ಕೊಠಡಿಗಳ ಕೊರತೆ ಮಾತ್ರವಲ್ಲದೆ, ಶಾಲಾ ಕಟ್ಟಡಗಳು ಶಿಥಿಲವಾಗಿ ವಿದ್ಯಾರ್ಥಿಗಳು ಜೀವಭಯದಲ್ಲಿ ಅಧ್ಯಯನ ನಡೆಸಬೇಕಾದ ಸ್ಥಿತಿ ಇದೆ. ಮೂಲಸೌಕರ್ಯಗಳ ಸ್ಥಿತಿ ಹೀಗಾದರೆ, ಶಿಕ್ಷಣದ ಗುಣಮಟ್ಟವಂತೂ ದಯನೀಯ. ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಪದೇಪದೇ ನಿಯೋಜಿಸುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಎಷ್ಟೋ ಕಡೆಗಳಲ್ಲಿ ಪ್ರೌಢ ಶಾಲೆಯ ಮಕ್ಕಳಿಗೆ ಸರಾಗವಾಗಿ ಓದು-ಬರಹ ಬರುವುದಿಲ್ಲ. ಗಣಿತ, ವಿಜ್ಞಾನವಂತೂ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ. ರಾಜ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 46,776 ಶಾಲೆಗಳಿವೆ.

ಅಂದರೆ, ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ಶಕ್ತಿ ಈ ಶಾಲೆಗಳಿಗೆ ಇದೆ. ಆದರೆ, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಸಮಸ್ಯೆಗಳಿಂದಲೇ ಈ ಶಾಲೆಗಳು ನಲುಗುತ್ತಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹೇಗೆ? ಅದಕ್ಕಾಗಿ, ಬಡ ಪಾಲಕರು ಸಹ ಸಾಲಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂಥ ಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ವಿಸ್ತರಣೆಯ ಜತೆಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಮತ್ತು ಡಿಜಿಟಲ್ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗಬೇಕು. ಸೂಕ್ತ ಕಲಿಕಾ ವಾತಾವರಣ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕು. ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಸಿದ್ಧಪಡಿಸದಿದ್ದಲ್ಲಿ ಮುಂದಿನ ದಿನಗಳು ಕಷ್ಟಕರ.

ಸರ್ಕಾರಿ ಶಾಲೆಗಳನ್ನು ಜ್ಞಾನ ಪ್ರಸರಣದ ಸಶಕ್ತ ಕೇಂದ್ರಗಳನ್ನಾಗಿಸಬೇಕು. ಈ ಕುರಿತು ಪ್ರಬಲ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಲ್ಲಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಖುಷಿಯಿಂದ ಬರುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ, ಶಾಲೆಗಳ ಸುಧಾರಣೆಗೆ ಸಾಮೂಹಿಕ ಪ್ರಯತ್ನ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net