

ಅರಕಲಗೂಡು: ವಿಜ್ಞಾನ ಕಲಿಕೆಗೆ ಹೆಚ್ಚಿನ ಮಹತ್ವವಿದ್ದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವ ಜತೆಗೆ ವೈಜ್ಞಾನಿಕ ಮನೋಭಾವ ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದರು.
ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರೌಢಶಾಲೆಗಳ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭಾ ವಿಕಾಸಕ್ಕೆ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳ ಮೂಲಕ ವೇದಿಕೆ ಒದಗಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆಗೆ ಮುಂದಾದರೆ ಯಶಸ್ಸು ಸಾಧ್ಯವಾಗುತ್ತದೆ. ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಮರಿಯಾನಗರ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಫರ್ಧೆಗಳಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಉಪ ಪ್ರಾಂಶುಪಾಲಕ ಮಹಾಲಿಂಗಪ್ಪ, ಶಿಕ್ಷಣ ಸಂಯೋಜಕ ಸಿ.ಡಿ. ಶ್ರೀನಿವಾಸ್, ತೀರ್ಪುಗಾರರಾಗಿದ್ದ ಶಿಕ್ಷಕ ಎಸ್.ವಿ ರಾಜೇಂದ್ರ, ಮೇಗಾರಾಣಿ, ಪದ್ಮನಾಭ, ಕವಿತಾ ಇದ್ದರು.
ತಾಲೂಕಿನ 26 ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವೈಯಕ್ತಿಕ ವಿಭಾಗದಲ್ಲಿ ಪಟ್ಟಣದ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಎಂ.ಆರ್.ಭವಿಶಂಕರ್ ಪ್ರಥಮ, ಸಿದ್ದಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯ ಎ.ಆರ್.ಪ್ರೀತಂ ಗೌಡ ದ್ವಿತೀಯ ಮತ್ತು ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಕೆ.ಕೆ. ಪೂರ್ವಾ ದಿಗಂತ್ ತೃತೀಯ ಬಹುಮಾನ ಪಡೆದರು.