

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಣ ಕಾವೇರತೊಡಗಿದ್ದು, ಎರಡನೇ ಬಾರಿ ಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಡೆಮಾಕ್ರಟಿಕ್ ಪಾರ್ಟಿಯಿಂದ ಜೋಯ್ ಬಿಡನ್ ಎದುರಾಳಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ಅಭ್ಯರ್ಥಿತನ ಇಂದು ಘೋಷಣೆಯಾಗಿದ್ದು, ಈ ಸಂಭ್ರಮವನ್ನು ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಡೆಮಾಕ್ರಟಿಕ್ ಪಾರ್ಟಿಯ ಕನ್ವೆನ್ಶನ್ ನಡೆಯುತ್ತಿದ್ದು, ಅಲ್ಲಿ ಜೋಯ್ ಬಿಡನ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸಲಾಗಿದೆ. ನಾಲ್ಕು ದಿನಗಳ ಈ ಸಭೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಸೇರಿ ಚುನಾವಣಾ ವಿಷಯಗಳು ಚರ್ಚೆಗೆ ಒಳಗಾಗುತ್ತಿದೆ. ಸಭೆಯು ಬಹುತೇಕ ವರ್ಚುವಲ್ ರೂಪದಲ್ಲೇ ನಡೆಯುತ್ತಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾಗುತ್ತಲೇ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಬಿಡನ್, ಡೆಮಾಕ್ರಟಿಕ್ ಬೆಂಬಲಿಗರ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಭರವಸೆನಯನ್ನು ನೀಡಿದ್ದಾರೆ. ಅಲ್ಲದೆ, ಟ್ರಂಪ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಹೆಚ್ಚಿಸಿದ್ದು, ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸತೊಡಗಿದ್ದಾರೆ. (ಏಜೆನ್ಸೀಸ್)