ಮಾಲಿಯಲ್ಲಿ ನಡೆಯಿತು ಸೇನಾ ಕ್ರಾಂತಿ: ರಾಜೀನಾಮೆ ಘೋಷಿಸಿದ ಅಧ್ಯಕ್ಷ

Ibrahim Boubacar Keïta
Published on

ಬಮಕೊ: ಆಫ್ರಿಕಾದ ಎಂಟನೇ ಅತಿದೊಡ್ಡ ದೇಶವಾದ ಮಾಲಿಯಲ್ಲಿ ಸೋಮವಾರ ತಡರಾತ್ರಿ ಸೇನಾಕ್ರಾಂತಿ ನಡೆದಿದ್ದು, ಮಂಗಳವಾರ ಬೆಳಗ್ಗೆ ಅಧ್ಯಕ್ಷ ಮತ್ತು ಪ್ರಧಾನಿ ಇಬ್ಬರೂ ಸೇನೆಯ ವಶದಲ್ಲಿದ್ದಾರೆ. ಏತನ್ಮಧ್ಯೆ, ಅಧ್ಯಕ್ಷ ಇಬ್ರಾಹಿಂ ಬೊಬುಕಾರ್ ಕೈಟಾ ತಮ್ಮ ಸ್ಥಾನಕ್ಕೆ ಮಂಗಳವಾರ ತಡರಾತ್ರಿ ರಾಜೀನಾಮೆ ಘೋಷಿಸಿದ್ದು, ಸಂಸತ್ತನ್ನು ವಿಸರ್ಜಿಸಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ರಾಜಕೀಯವಾಗಿ ಸಾಕಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಮಾಲಿಯಲ್ಲಿ ಕೈಟಾ ನಿರ್ಗಮನಕ್ಕೆ ಒತ್ತಡ ಹೆಚ್ಚಾಗಿತ್ತು. ಪ್ರತಿಭಟನೆಯೂ ಜೋರಾಗಿ ನಡೆದಿತ್ತು. ಅಧ್ಯಕ್ಷ ಪದವಿಯಲ್ಲಿ ಕೈಟಾ ಕೊನೆಯ ಅವಧಿ ಮುಗಿಯಲು ಇನ್ನೂ ಮೂರು ವರ್ಷ ಬಾಕಿ ಇತ್ತು. ಈ ಬೆಳವಣಿಗೆಯ ನಡುವೆ ಸೇನೆ ನಿಧಾನವಾಗಿ ರಾಷ್ಟ್ರ ರಾಜಧಾನಿ ಬಮಕೋದಲ್ಲಿ ತನ್ನ ನಿಯಂತ್ರಣವನ್ನು ಹೆಚ್ಚು ಮಾಡುತ್ತ ಬಂದಿದ್ದು, ಮಂಗಳವಾರ ಬೆಳಗ್ಗೆ ಅಧ್ಯಕ್ಷ ಮತ್ತು ಪ್ರಧಾನಿ ನಿವಾಸವನ್ನು ಸುತ್ತುವರಿದು ಕೆಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿತ್ತು.

ಆ ಮೂಲಕ ಸೇನಾಕ್ರಾಂತಿಯ ಸುಳಿವು ನೀಡಿತ್ತು. ಇದಾಗಿ ಮಂಗಳವಾರ ಸಂಜೆ ವೇಳೆಗೆ ಅಧ್ಯಕ್ಷ ಕೈಟಾ ರಾಜೀನಾಮೆ ಘೋಷಿಸಿದ್ದರು. ಕೂಡಲೇ ಕೈಟಾ ಮತ್ತು ಪ್ರಧಾನಿಯನ್ನು ಸೇನೆ ತನ್ನ ವಶದಲ್ಲಿ ಇರಿಸಿಕೊಂಡಿತು. ಈ ಸೇನಾ ಕ್ರಾಂತಿಯ ಬಗ್ಗೆ ಇದುವರೆಗೂ ಸೇನೆಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಯಾರು ಇದರ ನಾಯಕತ್ವ ವಹಿಸಿದ್ದು ಎಂಬುದೂ ಸ್ಪಷ್ಟವಾಗಿಲ್ಲ.

ಮಾಲಿಯಲ್ಲಿ ಸೇನಾ ಕ್ರಾಂತಿ ಹೊಸದೇನಲ್ಲ. ಎಂಟು ವರ್ಷದ ಹಿಂದೆ ಇದೇ ರೀತಿ ಸೇನಾಕ್ರಾಂತಿ ನಡೆದಿತ್ತು. ಇದಾಗಿ ಕೆಲವು ತಿಂಗಳ ನಂತರದಲ್ಲಿ ಚುನಾವಣೆ ನಡೆದು ಕೈಟಾ ಮತ್ತು ಬೆಂಬಲಿಗರು ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಮಾಲಿಯ ಸೇನಾಕ್ರಾಂತಿ ವಿಚಾರ ಜಗತ್ತಿನ ಗಮನಸೆಳೆದಿದ್ದು, ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಅಲ್ಲಿನ ಸೇನೆಯನ್ನು ಆಗ್ರಹಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net