

| ರಮೇಶ ದೊಡ್ಡಪುರ ಬೆಂಗಳೂರು
ಕರೊನಾ ವೈರಸ್ಗೆ ಔಷಧ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಶ್ರಮಿಸುತ್ತಿರುವಂತೆಯೇ, ಇತ್ತ ರಾಜ್ಯದಲ್ಲಿ ಪಾರಂಪರಿಕ ಆಯುರ್ವೇದ ವೈದ್ಯ ಪದ್ಧತಿ ಮೇಲೆ ಜನರ ವಿಶ್ವಾಸ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಮಹಾಮಾರಿಯನ್ನು ಮಟ್ಟಹಾಕಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕವಾಗಿರುವುದರಿಂದ ಆಯುರ್ವೇದ ಔಷಧಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಆಯುರ್ವೇದ ಸಂಸ್ಥೆಗಳ ಪ್ರಕಾರ ಔಷಧ ಮಾರಾಟದ ಪ್ರಮಾಣ ಶೇ.30ರಿಂದ ಶೇ.100ರವರೆಗೆ ಹೆಚ್ಚಿದೆ. ಮತ್ತೊಂದೆಡೆ, ಮನೆ ಔಷಧ ತಯಾರಿಸಿಕೊಳ್ಳುವವರ ಪ್ರಮಾಣವೂ ಏರಿಕೆ ಆಗಿದೆ.
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ, ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಮುಖವಾಗಿ ಡಾಬರ್, ಬೈದ್ಯನಾಥ್, ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ ಅವರ ಆಯುರ್ವೆದ, ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ, ಡಾ.ಗಿರಿಧರ ಕಜೆ ಔಷಧಗಳಿಗೆ ಜನ ಮುಗಿಬೀಳುತ್ತಿದ್ದಾರೆ.
ಹೆಚ್ಚಿದ ಜಾಗೃತಿ: ಆಯುರ್ವೇದ ಔಷಧಕ್ಕೆ ಬೇಡಿಕೆ ಹೆಚ್ಚಾಗಿರುವುದನ್ನು ಶ್ರೀಶ್ರೀ ಆಯುರ್ವೇದ ಸಂಸ್ಥೆಯ ಹಿರಿಯ ಶಿಕ್ಷಕ ಫಟಾಫಟ್ ಶ್ರೀನಿವಾಸ್ ಖಚಿತ ಪಡಿಸಿದ್ದಾರೆ. ‘ಆಯುರ್ವೇದ ಬಗ್ಗೆ ವಿಶ್ವಾದ್ಯಂತ ಸ್ವಲ್ಪ ಮಟ್ಟಿನ ಜಾಗೃತಿ ಇದ್ದೇ ಇತ್ತು. ಕರೊನಾ ಕಾಲಿಟ್ಟ ಏಪ್ರಿಲ್ನಿಂದ ಆಯುರ್ವೇದಕ್ಕೆ ತೀವ್ರ ಬೇಡಿಕೆ ಬಂದಿದೆ. ನಮ್ಮ ಸಂಸ್ಥೆಯ 4 ಔಷಧಗಳ ಕಿಟ್ಗೆ ಭಾರಿ ಬೇಡಿಕೆ ಇದೆ. ಕರೊನಾಕ್ಕೂ ಮೊದಲಿನದಕ್ಕೆ ಹೋಲಿಸಿದರೆ ಶೇ. 150-200ರಷ್ಟು ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದಿದ್ದಾರೆ.
ವಿಶ್ವಾಸ ಕಾರಣ
ಕರೊನಾ ಗುಣಪಡಿಸುವಲ್ಲಿ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಬೇಡಿಕೆ ಹೆಚ್ಚಳದ ಮೇಲೆ ಪ್ರಭಾವ ಬೀರಿದೆ. ಕರ್ನಾಟಕದಲ್ಲಿ ಸಚಿವ ಸಿ.ಟಿ.ರವಿ ತಾವು ಡಾ. ಗಿರಿಧರ ಕಜೆ ಔಷಧದಿಂದಲೇ ಗುಣಮುಖರಾಗಿರುವುದಾಗಿ ಹೇಳಿದ್ದರು. ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಆಯುರ್ವೇದ ಔಷಧ ಕಿಟ್ ವಿತರಿಸಿದ್ದರು. ಡಾ. ಕಜೆ ಅವರ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು, ಆಯುಷ್ ಇಲಾಖೆ ಸಂಶೋಧನೆಯಲ್ಲೂ ಉತ್ತಮ ಪರಿಣಾಮ ವ್ಯಕ್ತವಾಗಿತ್ತು. ‘ವೈರಾಣು ತೊಂದರೆಗಳಿಗೆ ನಮ್ಮ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಸಾತ್ಮ್ಯ ಹಾಗೂ ಭೌಮ್ಯ ಮಾತ್ರೆ ನೀಡುತ್ತಿದ್ದೆವು. ಕ್ಲಿನಿಕಲ್ ಟ್ರಯಲ್ ಆರಂಭಿಸುವ ಸಮಯದಿಂದಲೇ ಆ ಮಾತ್ರೆಗಳ ಮಾರಾಟ ಸ್ಥಗಿತಗೊಳಿಸಿದ್ದೇವೆ. ಆದರೆ ಇನ್ನಿತರ ರೋಗನಿರೋಧಕ ಶಕ್ತಿ ವೃದ್ಧಿಯ ಔಷಧಗಳಿಗೆ ಬೇಡಿಕೆ ಇದೆ. ಒಟ್ಟಾರೆ ಭಾರತೀಯ ವೈದ್ಯಪದ್ಧತಿಯ ಬಗ್ಗೆ ಜನರು ಒಲವು ತೋರುತ್ತಿರುವುದು ಸ್ವಾಗತಾರ್ಹ’ಎಂದು ಡಾ.ಗಿರಿಧರ ಕಜೆ ಹೇಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ‘ವೋಕಲ್ ಫಾರ್ ಲೋಕಲ್’ ಎಂದು ಕರೆ ನೀಡಿದ್ದು ಸಾಕಷ್ಟು ಪರಿಣಾಮ ಬೀರಿದೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳ ಮಾರಾಟದಲ್ಲಿ ಶೇ.25-30 ಹೆಚ್ಚಳವಾಗಿದೆ. ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚಿರುವ ಬೇಡಿಕೆ ಕರೊನಾ ನಂತರವೂ ಮುಂದುವರಿಯುವ ವಿಶ್ವಾಸವಿದೆ. | ಭವರ್ಲಾಲ್ ಆರ್ಯ ಪತಂಜಲಿ ಯೋಗಪೀಠ, ಕರ್ನಾಟಕ ಪ್ರಭಾರಿ
ಅಂಗಡಿಗಳ ಮುಂದೆ ಕ್ಯೂ
‘ಮೊದಲು ಔಷಧಕ್ಕಾಗಿ ದಿನಕ್ಕೆ 15-20 ಜನ ಆಗಮಿಸುತ್ತಿದ್ದರು. ಕರೊನಾ ನಂತರದಲ್ಲಿ ಈ ಸಂಖ್ಯೆ 50-100ಕ್ಕೆ ಏರಿಕೆ ಆಗಿದೆ’ ಎಂದು ಬೆಂಗಳೂರಿನ ಮಲ್ಲೇಶ್ವರದ ಪ್ರಮುಖ ಆಯುರ್ವೇದ ಮೆಡಿಕಲ್ ಸ್ಟೋರ್ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಬಹುತೇಕರು ರೋಗನಿರೋಧಕ ಶಕ್ತಿ ವೃದ್ಧಿಸುವ ಕಷಾಯದ ಪುಡಿ ಮತ್ತು ಮಾತ್ರೆ, ಚ್ಯವನಪ್ರಾಶ ಖರೀದಿಸುತ್ತಿದ್ದಾರೆ. ಪ್ರಸಿದ್ಧ ಕಂಪನಿಗಳ ಜತೆಗೆ ಮಡಿಕೇರಿ, ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದೆಡೆ ಗುಡಿಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನೂ ಕೊಳ್ಳುತ್ತಾರೆ. ಅನೇಕ ಆಯುರ್ವೇದ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಿದೆ.