

ಚಳ್ಳಕೆರೆ: ಪತ್ರಕರ್ತರ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸಲು ಸರ್ಕಾರದ ಹಂತದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಜನಪರ ಆಡಳಿತ ಮಾಡುವಂತೆ ಉತ್ತೇಜಿಸುವ ಜತೆಗೆ ಸದಾ ಎಚ್ಚರಿಸುವ, ಪ್ರಜಾಪ್ರಭುತ್ವ ರಕ್ಷಿಸುವ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರದ್ದಾಗಿದೆ ಎಂದು ಹೇಳಿದರು.
ಪತ್ರಕರ್ತರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಆದರೂ, ಸಂವಿಧಾನಬದ್ಧ ಕಾನೂನು ಅಡಿಯಲ್ಲಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯದ 16 ಸಾವಿರ ಪತ್ರಕರ್ತರ ಬಹುವರ್ಷಗಳ ಬೇಡಿಕೆ ಆಗಿರುವ ಉಚಿತ ಬಸ್‌ಪಾಸ್ ಮತ್ತು ವಸತಿ ವ್ಯವಸ್ಥೆ ಕುರಿತು ಬಗ್ಗೆ ಸರ್ಕಾರದ ಹಂತದಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಕಳೆದ ಸರ್ಕಾರಕ್ಕೆ 2 ಸಾವಿರ ಪತ್ರಕರ್ತರು ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರ ಈಡೇರಿಸಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ 16 ಸಾವಿರ ಪತ್ರಕರ್ತರು ಬದುಕಿನ ಭದ್ರತೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸೇವೆ ಮಾಡಿರುವ ಹಿರಿಯ ಪತ್ರಕರ್ತರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ರಾಜ್ಯ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ತಕ್ಷಣ ಮುಂದಾಗಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ಪಾರಿಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ನಗರಸಭಾ ಸದಸ್ಯ ಆರ್.ರುದ್ರನಾಯಕ, ಸಂಘಟನೆ ತಾಲೂಕಾಧ್ಯಕ್ಷ ಆರ್.ದ್ಯಾಮರಾಜ್, ವಕೀಲರ ಸಂಘದ ತಾಲೂಕಾಧ್ಯಕ್ಷ ಜಿ.ಎಂ.ಆನಂದಪ್ಪ, ಪಿ.ಐ.ದೇಸಾಯಿ, ಡಾ.ಲೋಕೇಶ್, ಜಾಲಿಮಂಜು, ಡಿ.ವೀರಣ್ಣ, ಇ.ನಾಗರಾಜ್, ಡಿ.ಎಚ್.ರಾಮು, ಮೈಲಹಳ್ಳಿ ತಿಪ್ಪೇಸ್ವಾಮಿ ಇತರರಿದ್ದರು.