

ಚಿಕ್ಕಮಗಳೂರು: ಪ್ರಜಾಪ್ರಭುತ್ವ ಎನ್ನುವ ಹೆಸರಿಗೆ ಸಮನಾದ ಪದವಿದ್ದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ. ವಿಶ್ವದಲ್ಲೇ ಅತಿ ದೊಡ್ಡದಾದ ಲಿಖಿತ ಸಂವಿಧಾನವಿದ್ದರೆ ಅದು ಭಾರತದ್ದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಸಂಸ್ಥೆ ಪ್ರಜಾಪ್ರಭುತ್ವದ ಆಶಯಗಳನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಮೂಲಕ ಪ್ರಜೆಗಳಿಗೆ ಏನೆಲ್ಲಾ ಅವಕಾಶಗಳು ಸಿಗಲಿವೆ ಎಂಬುದನ್ನು ತಿಳಿಸಿಕೊಡಲಾಗುತ್ತಿದೆ. ಹೀಗಾಗಿ ಯುವಜನತೆ ಪ್ರಜಾಪ್ರಭುತ್ವವನ್ನು ಅರ್ಥೈಸಿಕೊಳ್ಳುವ ಜತೆಗೆ ಪಾಲಿಸಬೇಕಿದೆ. ಸಾಮಾನ್ಯನೊಬ್ಬ ವಿಶ್ವಮಾನವನಾಗಿ ರೂಪುಗೊಳ್ಳಲು ಇಂತಹ ದಿನಾಚರಣೆಗಳು ಪ್ರೇರಣೆ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅರ್ಥ ಮಾಡಿಕೊಂಡರೆ ನಮ್ಮ ಸಂವಿಧಾನದ ಪ್ರಾಮುಖ್ಯತೆ ತಿಳಿಯುತ್ತದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯರೂ ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ರೂಪಿಸಬೇಕು. ಹೀಗಾಗಿ ಗ್ರಾಪಂ ಮಟ್ಟದಲ್ಲೂ ಪ್ರಜಾಪ್ರಭುತ್ವ ದಿನಾಚರಣೆ ಮೂಲಕ ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನವನ್ನು ಅರ್ಥ ಮಾಡಿಕೊಂಡು ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಜತೆಗೆ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ಇಂದಿಗೂ ಸಮಾಜದಲ್ಲಿ ಜೀವಂತವಿರುವ ಅಸಮಾನತೆ ತೊಲಗಿದಾಗ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ನಿರೀಕ್ಷಾ, ಅಂಜಲಿಗೆ ಪ್ರಥಮ ಸ್ಥಾನ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಶೃಂಗೇರಿ ಜೆಸಿಬಿಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಸ್.ಆರ್.ನಿರೀಕ್ಷಾ ಪ್ರಥಮ, ಅಜ್ಜಂಪುರ ಸುಬ್ರಮಣ್ಯ ಶ್ರೇಷ್ಠಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಎಚ್.ಪಿ.ದರ್ಶನ್ ದ್ವಿತೀಯ, ತರೀಕೆರೆ ತಾಲೂಕು ರಂಗೇನಹಳ್ಳಿ ಕೆಪಿಎಸ್‌ನ ನವ್ಯಾ ತೃತೀಯ ಸ್ಥಾನ ಪಡೆದರು. ಪ್ರಬಂಧ ಸ್ಫರ್ಧೆಯಲ್ಲಿ ತೇಗೂರು ಮುರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಿ.ಆರ್.ಅಂಜಲಿ ಪ್ರಥಮ, ಶೃಂಗೇರಿ ಬಿಜಿಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ ದ್ವಿತೀಯ ಹಾಗೂ ತರೀಕೆರೆಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಎಂ.ಹರಿಣಿ ತೃತೀಯ ಬಹುಮಾನ ಪಡೆದರು.
ಚಿಕ್ಕಮಗಳೂರಿನ ಶಾಲೆಗಳಿಗೆ ಸಂವಿಧಾನ ಪ್ರಸ್ತಾವನೆಯ ಫಲಕಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಡಾ. ಮೀನಾ ನಾಗರಾಜ್ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಉಪವಿಭಾಗಾಧಿಕಾರಿ ರಾಜೇಶ್, ನಗರಸಭೆ ಆಯುಕ್ತ ಬಸವರಾಜ್, ಎಐಟಿ ಕಾಲೇಜು ಪ್ರಾಚಾರ್ಯ ಡಾ. ಜಯದೇವ್, ಪ್ರಮುಖರಾದ ಹಿರೇಮಗಳೂರು ರಾಮಚಂದ್ರ, ಪುಟ್ಟನಾಯ್ಕ, ಬೆಟಗೇರಿ ಶಂಕರ್, ಅಣ್ಣಯ್ಯ, ರತ್ನಮ್ಮ ಇತರರಿದ್ದರು.