

ಗದಗ/ಹೊಸಪೇಟೆ: ಗಜೇಂದ್ರಗಡ ತಾಲೂಕಿನ ಹಾಲಕೇರಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಸಂಗನಬಸವ (ಡಾ.ಅಭಿನವ ಅನ್ನದಾನೇಶ್ವರ) ಮಹಾಸ್ವಾಮೀಜಿ (85) ಸೋಮವಾರ ಬೆಳಗ್ಗೆ ಲಿಂಗೈಕ್ಯರಾದರು. ಶ್ರೀಗಳು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಶರೀರ ತ್ಯಜಿಸಿದರು. ನಾಡಿನ ಹೆಸರಾಂತ ಶಿವಯೋಗ ಮಂದಿರ ಅಧ್ಯಕ್ಷರಾಗಿದ್ದ ಡಾ.ಸಂಗನಬಸವ ಶ್ರೀಗಳು, ವೀರಶೈವ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದರು. ಬಾಗಲಕೋಟೆ, ಹುಬ್ಬಳ್ಳಿ ಬಸವೇಶ್ವರ ವಿದ್ಯಾವರ್ಧಕ ಸಂಘ, ಅನ್ನದಾನ ವಿಜಯ ವಿದ್ಯಾವರ್ಧಕ ಸಂಘ, ಬಳ್ಳಾರಿ ವಿಜಯನಗರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷರಾಗಿದ್ದರು. ಗದಗ, ಬಳ್ಳಾರಿ, ಹೊಸಪೇಟೆ, ಕೊಟ್ಟೂರು, ಹಾಲಕೇರಿ, ಹಾನಗಲ್, ಶಿವಯೋಗ ಮಂದಿರ ಹೀಗೆ ನಾಡಿನಾದ್ಯಂತ ಸುಮಾರು 128 ಶಾಖಾ ಮಠಗಳಿವೆ. 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿವೆೆ. ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ವಸತಿ ದಾಸೋಹದ ಮೂಲಕ ಬೆಳಕಾಗಿದ್ದರು. ಶ್ರೀಗಳ ಅಗಲಿಕೆಯಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.
ಶ್ರೀಗಳು ಲಿಂಗ್ಯಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಿಎಂ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ ಅವರು ಡಾ.ಸಂಗನಬಸವ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದರು.
ಸಮನ್ವಯದ ಸಾಕಾರ ಮೂರ್ತಿ ಸಂಗನಬಸವ ಶ್ರೀ ಹಾನಗಲ್ ಕುಮಾರಸ್ವಾಮಿಗಳು ಸಮಾಜದ ಬಗ್ಗೆ ಸದಾ ಚಿಂತನೆ ನಡೆಸುತ್ತಿ ದ್ದರು. ಗುರು-ವಿರಕ್ತರ ಸಮಾಗಮಕ್ಕೆ ಸೇತುವಾಗಿದ್ದರು. ಹೊಸಪೇಟೆ ಜಗದ್ಗುರುಗಳ ಲಿಂಗೈಕ್ಯ ದೊಡ್ಡ ನಷ್ಟವಾಗಿದೆ. ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದ ಸ್ವಾಮೀಜಿ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದಲ್ಲಿ ಅವರ ಸಾಧನೆ ಅಮರ.
| ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಶ್ರೀಶೈಲ ಪೀಠ
ಡಾ. ಸಂಗನಬಸವ ಮಹಾಸ್ವಾಮಿಗಳು ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಸಾಕಷ್ಟು ಸಾಮಾಜಿಕ ಕಾರ್ಯ, ಶೈಕ್ಷಣಿಕ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ. ಹೊಸಪೇಟೆ, ಹಾಲಕೇರೆ, ಬಳ್ಳಾರಿಯ ಮಠಗಳಲ್ಲಿ ಸಾಕಷ್ಟು ಸಾಮಾಜಿಕ, ಶೈಕ್ಷಣಿಕ ಕ್ರಾಂತಿ ನಡೆದಿವೆ.
| ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸುತ್ತೂರು ಮಠ, ಮೈಸೂರು
85 ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದ ಶ್ರೀಗಳಿಗೆ ಸರ್ಕಾರ ಅತ್ಯನ್ನತ ಪ್ರಶಸ್ತಿ ನೀಡಬೇಕು. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಎದ್ದಾಗ ಲಕ್ಷಗಟ್ಟಲೆ ಜನರನ್ನು ಸೇರಿಸಿ ವೀರಶೈವ ಲಿಂಗಾಯತ ಧರ್ಮ ಎರಡೂ ಒಂದೇ ಅಂತ ಸಾರಿದ್ದರು.
| ಉಜ್ಜಯಿನಿ ಜಗದ್ಗುರುಗಳು
ಅನ್ನ, ಅಕ್ಷರ, ವಸತಿ ದಾಸೋಹದ ಮೂಲಕ ಭಕ್ತರ ಪಾಲಿನ ಬೆಳಕಾಗಿದ್ದ ಡಾ.ಸಂಗನಬಸವ ಸ್ವಾಮಿಗಳು ಲಿಂಗೈಕ್ಯರಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ತಂದಿದೆ. ಶ್ರೀಗಳ ಅಗಲಿಕೆ ನೋವನ್ನು ಸಮಾಜ ಹಾಗೂ ಭಕ್ತರಿಗೆ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. | ಡಾ. ವಿಜಯ ಸಂಕೇಶ್ವರ ಚೇರ್ಮನ್ ವಿಆರ್ಎಲ್ ಸಮೂಹ ಸಂಸ್ಥೆಗಳು
ಹಾಲಕೇರಿ ಮಠದಲ್ಲಿ ಸಮಾಧಿ: ಗದಗ ಜಿಲ್ಲೆ ಹಾಲಕೇರಿ ಮಠದಲ್ಲಿ ಶ್ರೀಗಳ ಸಮಾಧಿ ಸಿದ್ಧಗೊಳಿಸಲಾಗಿದೆ. ಬೆಂಗಳೂರಿನಿಂದ ಹೊಸಪೇಟೆಗೆ ತಂದು ಭಕ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಬಳ್ಳಾರಿ ಮುಖಾಂತರ ಹಾಲಕೇರಿ ಗ್ರಾಮಕ್ಕೆ ತರಲಾಯಿತು. ಮಂಗಳವಾರ ಬೆಳಗ್ಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಹಾಲಕೇರಿ ಮಠದಲ್ಲಿ ಲಿಂಗೈಕ್ಯ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಸುತ್ತೂರು ಶ್ರೀಮಠದ ಡಾ. ಶಿವರಾತ್ರಿದೇಶಿ ಕೇಂದ್ರ ಮಹಾಸ್ವಾಮೀಜಿ ಹಾಗೂ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ರಾಜಯೋಗಿಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ದಣಿವರಿಯದ ಕಾಯಕಯೋಗಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ‘ಬಿದಿರೆ’ ಗ್ರಾಮದಲ್ಲಿ ಸ್ವತಂತ್ರ ಮಠದ ಶರಣ ದಂಪತಿಗಳಾದ ಶಿವಯೋಗ ಸಂಪನ್ನರಾದ ಬಸವಲಿಂಗಯ್ಯ, ಗುರಮ್ಮನವರ ಉದರದಲ್ಲಿ ಜನಿಸಿ ‘ರಾಚಯ್ಯ’ (ಸಂಗನಬಸವ) ಎಂಬ ನಾಮಧೇಯದಿಂದ ಕರೆಯಿಸಿಕೊಂಡರು. ಶ್ರೀ ಗುರು ಕುಮಾರ ಶಿವಯೋಗಿಗಳು ನಿರ್ವಿುಸಿದ ಶಿವಯೋಗ ಮಂದಿರದಲ್ಲಿ ಜಂಗಮಾಶ್ರಯ ಪಡೆದು, ವಾರಾಣಸಿಯಲ್ಲಿ (ಕಾಶಿ) ಉನ್ನತ ವ್ಯಾಸಂಗ ಮಾಡಿದರು. ಹಿಂದಿ, ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಪರಿಣತರಾಗಿ ಧರ್ಮ-ತತ್ವ-ವಿವೇಕ ಪಡೆದು ಕಾಯಕ ಶಿವಯೋಗಿಗಳಾದರು. ಶ್ರೀ ನೀಲಲೋಚನ ಶ್ರೀಗಳು ಹಾಗೂ ಕಾಯಕ ತಪಸ್ವಿ ಶ್ರೀ ನಾಗನೂರು ಶಿವಬಸವ ಸ್ವಾಮಿಗಳವರ ಮಾನಸ ಶಿಷ್ಯರಾಗಿದ್ದ ಸಂಗನ ಬಸವ ಶ್ರೀಗಳು, 1972ರಲ್ಲಿ ಜಗದ್ಗುರು ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಬಳ್ಳಾರಿ-ಹೊಸಪೇಟೆ ನಾಡಿನ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರುಗಳಾದರು. 1987ರಲ್ಲಿ ಹಾಲಕೆರೆ ಸಂಸ್ಥಾನಮಠದ ಅಧಿಕಾರ ವಹಿಸಿಕೊಂಡು ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳಾಗಿ ನರೇಗಲ್ಲ, ಬಳ್ಳಾರಿ ನಾಡು, ಶಿವಯೋಗ ಮಂದಿರವನ್ನು ಧಾರ್ವಿುಕ ಹಾಗೂ ಶೈಕ್ಷಣಿಕ ಬೀಡಾಗಿ ರೂಪಿಸಿದರು.
ಶಿಷ್ಯನಿಗೆ ಪಟ್ಟಾಧಿಕಾರ: ಶ್ರೀಮಠದಲ್ಲಿ ನ. 8, 9ಮತ್ತು 10 ರಂದು ಅನ್ನದಾನೇಶ್ವರ ಶ್ರೀಗಳ ಗುರುವಂದನಾ ಹಾಗೂ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರ ಚರಪಟ್ಟಾಧಿಕಾರ ಕಾರ್ಯಕ್ರಮ ನೆರವೇರಿತು. ಈ ಮೂಲಕ ಜವಾಬ್ದಾರಿ ಪೂರ್ಣಗೊಳಿಸಿಯೇ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ವೀರಶೈವ ಧರ್ಮ, ಸಂಸ್ಕೃತಿ ಪುನರುತ್ಥಾನ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಗಳು ಧಾರ್ವಿುಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಶ್ರಮಿಸಿದ್ದನ್ನು ಮರೆಯಲಾಗದು. ಶ್ರೀಗಳ ಅಗಲಿಕೆಯಿಂದ ಹಳೆ ತಲೆಮಾರಿನ ಮತ್ತೊಂದು ಕೊಂಡಿ ಕಳಚಿದಂತಾಗಿದೆ.
| ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು
ಡಾ. ಸಂಗನಬಸವ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
| ಸಿದ್ದರಾಮಯ್ಯ ಮಾಜಿ ಸಿಎಂ